ಮೂಡಿಗೆರೆ : ಬೀದಿ ನಾಯಿಗಳ ಹಾವಳಿ – ಸಾರ್ವಜನಿಕರಲ್ಲಿ ಆತಂಕ…

692
firstsuddi
  • ವರದಿ :ಸುಧೀರ್ ಮೊದಲಮನೆ.

ಮೂಡಿಗೆರೆ : ತಾಲೂಕಿನ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿ ಹೆಚ್ಚಳಗೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೂಡಿಗೆರೆ ಪಟ್ಟಣ ಪ್ರದೇಶ ಸೇರಿದಂತೆ, ಬೀಜುವಳ್ಳಿ, ಗಂಗನಮಕ್ಕಿ, ಹ್ಯಾಂಡ್ ಪೋಸ್ಟ್, ಬಿದಿರಹಳ್ಳಿ ಸೇರಿದಂತೆ ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತಗೊಂಡಿದೆ.
ಹೊರ ಜಿಲ್ಲೆಗಳಿಂದ ಬೀದಿ ನಾಯಿಗಳನ್ನು ಮಲೆನಾಡು ಪ್ರದೇಶಗಳಿಗೆ ತಂದು ಬಿಡುತ್ತಿರುವುದು ಸಮಸ್ಯೆ ಹೆಚ್ಚಳವಾಗಲು ಕಾರಣ ಎನ್ನಲಾಗಿದೆ. ಬೀದಿ ನಾಯಿಗಳ ವರ್ತನೆ ಹಿಂಸಾ ಮನೋಭಾವನೆಯಿಂದ ಕೂಡಿದ್ದು, ನಾಯಿಗಳ ಹಾವಳಿ ನಿರ್ವಹಣೆ ಹಾಗೂ ಕಡಿವಾಣ ಹಾಕುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ರಸ್ತೆಯಲ್ಲಿ ಸಾಗುವಾಗ ಪಾದಾಚಾರಿಗಳ ಮೇಲೆ ಏಕಾಏಕಿ ಮುಗಿಬೀಳುವುದರಿಂದ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಬಿದ್ದು ಗಾಯ ಮಾಡಿಕೊಂಡ ಉದಾಹರಣೆ ಸಾಕಷ್ಟಿದೆ. ಮನೆಯಿಂದ ಹೊರ ಹೋಗಿ ಹಿಂತಿರುಗಿ ಬರುವವರೆಗೂ ಜೀವ ಹೋಗಿ ಬಂದಂತೆ ಭಾಸವಾಗುತ್ತದೆ. ಕವರ್‍ಗಳನ್ನು ಹಿಡಿದುಕೊಂಡು ಹೋಗುತ್ತಿದ್ದರೆ ದಾಳಿ ಮಾಡಿ ಕವರ್‍ಗಳನ್ನು ಕಿತ್ತುಕೊಂಡು ಹೋಗುತ್ತವೆ. ಚಿಕ್ಕ ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಬರುವಾಗ ಜೊತೆಯಲ್ಲಿ ಯಾರನ್ನಾದರೂ ಕಳುಹಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ಬೆಳಗಿನ ಜಾವದಲ್ಲಿ ವಾಕಿಂಗ್ ಹೋಗುವಾಗ ಒಬ್ಬಂಟಿಯಾಗಿ ಹೋಗುವಂತೆ ಇಲ್ಲ. ಹದಿನೈದರಿಂದ ಇಪ್ಪತ್ತು ನಾಯಿಗಳು ಬೊಗಳುತ್ತಾ ಅಟ್ಟಿಸಿಕೊಂಡು ಬರುತ್ತವೆ. ಐದಾರು ಜನ ಒಟ್ಟಿಗೆ ಹೋದರೂ ಅವುಗಳು ಹೆದರುವುದಿಲ್ಲ. ಹಗಲು ಹೊತ್ತಿನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಇವು ರಾತ್ರಿಯಾಗುತ್ತಿದ್ದಂತೆ ಪ್ರತ್ಯಕ್ಷವಾಗುತ್ತವೆ. ರಾತ್ರಿಯಿಡೀ ಇವುಗಳದ್ದೇ ಕಾರುಬಾರು, ತಡರಾತ್ರಿ ಹೊರಗಿನಿಂದ ಪ್ರಯಾಣಿಕರು ಬಂದರೆ ಅವರ ಮನೆಗೆ ಹೋಗಿ ಸೇರುವವರೆಗೂ ಆತಂಕದಿಂದ ಇರಬೇಕಾಗುತ್ತದೆ. ಏಕಾಏಕಿ ರಸ್ತೆಗೆ ಅಡ್ಡವಾಗಿ ನಾಯಿಗಳು ನುಗ್ಗುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುವ ಜೊತೆಗೆ ವಾಹನ ಕೂಡ ಜಖಂ ಆಗುತ್ತಿವೆ. ಹೆಲ್ಮೆಟ್ ಧಾರಣೆ ಮಾಡಿರುವುದರಿಂದ ಬಹುತೇಕ ದ್ವಿಚಕ್ರ ವಾಹನ ಸವಾರರಿಗೆ ರಸ್ತೆಗೆ ಅಡ್ಡಲಾಗಿ ಬರುವ ನಾಯಿಗಳು ಮುಂಚಿತವಾಗಿ ತಿಳಿಯುವುದಿಲ್ಲ. ‘ಕಾನೂನುಗಳನ್ನು ಜಾರಿಗೆ ತರುವುದರ ಜೊತೆಗೆ, ಕಾನೂನು ಪಾಲಿಸುವ ವಾಹನ ಸವಾರರ ಕಷ್ಟಗಳನ್ನೂ ಕೂಡ ಗಮನದಲ್ಲಿ ಇಟ್ಟುಕೊಂಡು ಇಂಥಹ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು’ ಎನ್ನುತ್ತಾರೆ ಬೈಕ್ ಸವಾರ ತ್ಯಾಗರಾಜ್ ಅರಸ್ ಅವರು.
ನಾಯಿಗಳ ಹೆಚ್ಚಿನ ತಂಡಗಳು ಬಸ್ ನಿಲ್ದಾಣ, ಹೋಟೆಲ್‍ಗಳು, ಮಾಂಸದ ಅಂಗಡಿಗಳ ಬಳಿ ಸುಳಿದಾಡುತ್ತಿದ್ದು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ. ಸಂಜೆಯ ವೇಳೆಗೆ ಹೆಚ್ಚಿನ ತ್ರ್ಯಾಜ್ಯ ಸಂಗ್ರಹವಾಗುವುದರಿಂದ, ಅಲ್ಲಿಯವರೆಗೂ ರಸ್ತೆಗಳ ಅಕ್ಕಪಕ್ಕ ಅಥವಾ ಜನಸಂದಣಿ ಕಡಿಮೆ ಇರುವ ಜಾಗಗಳಲ್ಲಿ ವ್ಯವಸ್ಥಿತವಾಗಿ ಕಾಯುತ್ತಿರುತ್ತವೆ. ಅಲ್ಲಿಯವರೆಗೂ ಹಸಿವಿನಿಂದ ಕಾದಿರುವ ನಾಯಿಗಳು ಇಂಥಹ ಸಂದರ್ಭದಲ್ಲಿ ಮಕ್ಕಳು ಮಹಿಳೆಯರು ಏನಾದರೂ ಆ ದಾರಿಯಲ್ಲಿ ಸುಳಿದಾಡಿದರೆ ಮೈಮೇಲೆ ಮುಗಿ ಬೀಳುತ್ತವೆ. ಇಂದು ಕೂಡ ಮನೆಯ ಆವರಣದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ಹರಿದು ಹಾಕಿದ್ದು, ಓಡಿಸಲು ಹೋದರೆ ಮೈಮೇಲೆ ಎರಗುತ್ತಿವೆ. ಪ್ರೀತಿಯಿಂದ ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಸಾಕು ನಾಯಿಗಳ ಮೇಲೆ ಕೂಡ ದಾಳಿ ನಡೆಸುತ್ತಿವೆ. ಪೋಲೀಸ್‍ಗೆ ದೂರು ನೀಡೋಣವೆಂದರೆ ನಾಯಿಗಳ ಮೇಲೆ ದೂರು ನೀಡುವುದಾದರೂ ಹೇಗೆ ಎಂದು ಗೃಹಿಣಿ ಸುವರ್ಣಮ್ಮ ಆರೋಪಿಸಿದರು.
ಪ್ರತೀ ವರ್ಷವೂ ನಗರ ಪ್ರದೇಶದ ಬೀದಿ ನಾಯಿಗಳಿಗೆ ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಜಿಲ್ಲಾಡಳಿತ ವತಿಯಿಂದ ಸ್ಥಳ ಗುರುತಿಸುವಂತೆ ಜಿಲ್ಲಾಡಳಿತ ಸಭೆ ಕರೆದು ªಕ್ರಮ ಕೈಗೊಳ್ಳಲಾಗುತ್ತದೆ. ಸಂತಾನಹರಣ ಯೋಜನೆಯನ್ನು ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ನಾಯಿಗಳ ಹಾವಳಿ ಇಲ್ಲ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿಯೇ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವಿಚಾರವಾಗಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ಮಾಡಿ ಕೂಡಲೇ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ತಾ.ಪಂ.ಅಧ್ಯಕ್ಷ ಕೆ.ಸಿ.ರತನ್ ಅವರು ಬೀದಿ ನಾಯಿಗಳ ಹಾವಳಿ ಕುರಿತು ಯಾವುದೇ ಅಧಿಕೃತ ದೂರುಗಳು ದಾಖಲಾಗಿಲ್ಲ. ಆದರೂ ವಿಷಯದ ಗಂಭೀರತೆ ಅರ್ಥ ಮಾಡಿಕೊಂಡು ಸಮಸ್ಯೆ ಬಗೆಹರಿಸುವ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ಸಾರ್ವಜನಿಕರು ಕತ್ತಲಿನ ಹೊತ್ತಿನಲ್ಲಿ ತಿರುಗಾಡುವಾಗ ಎಚ್ಚರ ವಹಿಸುವಂತೆ ಹಾಗೂ ಗುಂಪು ಗುಂಪಾಗಿ ವಾಯು ವಿಹಾರಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ.