ಮೂಡಿಗೆರೆ : ಲಾಕ್‍ಡೌನ್ ಉಲ್ಲಂಘನೆ-ಚೆಕ್‍ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೇ ವೇಗವಾಗಿ ಹೋದ ಮಂಗಳೂರು ತಾ.ಪಂ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲು…

869
firstsuddi

ಕೊಟ್ಟಿಗೆಹಾರ : ಏಪ್ರಿಲ್ 14 ರಂದು ಬೆಳಿಗ್ಗೆ ಚೆಕ್‍ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋದ ಮಂಗಳೂರು ತಾ.ಪಂ ಅಧ್ಯಕ್ಷರು ಸೇರಿದಂತೆ ಮೂವರ ಮೇಲೆ ಬಣಕಲ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಮಂಗಳೂರು ತಾ.ಪಂ ಅಧ್ಯಕ್ಷರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ತಾ.ಪಂ ಅಧ್ಯಕ್ಷರಾದ ಮಂಗಳೂರು ಸಮೀಪದ ಕೊಣಜೆಯ ಮಹಮದ್, ವಾಹನದಲ್ಲಿದ್ದ ಮಂಗಳೂರಿನ ಹನೀಪ್, ಸಫ್ವಾನ್ ಅವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 14 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಂಗಳೂರು ಕಡೆಯಿಂದ ಬಂದ ಕೆಎ 19 ಜಿ 0986 ಸಂಖ್ಯೆಯ ತಾಲ್ಲೂಕು ಪಂಚಾಯತಿ ಕರ್ನಾಟಕ ಸರ್ಕಾರ ಎಂಬ ನಾಮಫಲಕ ಇರುವ ವಾಹನ ಚಾರ್ಮಾಡಿ ಘಾಟ್ ಮಾರ್ಗವಾಗಿ ಬಂದಿದ್ದು ಕೊಟ್ಟಿಗೆಹಾರದ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ವಾಹನ ನಿಲ್ಲಿಸುವಂತೆ ಸೂಚಿಸಿದರೂ ಕೂಡ ವಾಹನ ನಿಲ್ಲಿಸದೇ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದು 10.30 ಕ್ಕೆ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ಮೂಲಕ ವಾಹನ ನಿಲ್ಲಿಸದೇ ವಾಪಸ್ ಮಂಗಳೂರು ಕಡೆಗೆ ಸಾಗಿದ್ದಾರೆ. ವಾಹನದಲ್ಲಿ 4 ಮಂದಿ ಇರುವುದು ಕಂಡು ಬಂದಿದ್ದು ಆರೋಪಿಗಳು ಸರ್ಕಾರದ ನಿಯಮ ಉಲ್ಲಂಘಿಸಿರುವುದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.