ಮೂಡಿಗೆರೆ : ವಿವಾದಿತ ಸಮಾಧಿ ಶಿಲುಬೆ ಶಾಂತಿಯುತವಾಗಿ ಸ್ಥಳಾಂತರ…

112
firstsuddi

ಮೂಡಿಗೆರೆ : ತಾಲೂಕಿನಲ್ಲಿ 130 ವರ್ಷಗಳಿಂದ ತೀವ್ರ ವಿವಾದ ಹುಟ್ಟಿಸಿದ್ದ ಕ್ರೈಸ್ತ ಸಮುದಾಯದ ಸಮಾಧಿಯನ್ನ ಕ್ರೈಸ್ತರು ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದಾರೆ. ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ಕ್ರೈಸ್ತ ಸಮುದಾಯ ಶಿಲುಬೆಯನ್ನ ಸಮುದಾಯದ ಮುಖಂಡರು ಹಾಗೂ ಪಟ್ಟಣ ಪಂಚಾಯತ್ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ಸ್ಥಳಾಂತರಿಸಿದ್ದಾರೆ.

1884ರಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸ್ಯಾಮುಯಲ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಸ್ಥಳಿಯ ಕ್ರೈಸ್ತ ಸಮುದಾಯ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಿತ್ತು. ಅಂದಿನಿಂದಲೂ ಈ ಜಾಗ ವಿವಾದಕ್ಕೆ  ಕಾರಣವಾಗಿತ್ತು. ಪಟ್ಟಣ ಪಂಚಾಯ್ತಿ ನಾಲ್ಕೈದು ದಶಕಗಳಿಂದ ಮಳಿಗೆ ನಿರ್ಮಿಸಲು ಈ ವಿವಾದಿತ ಶಿಲುಬೆಯನ್ನ ತೆರವುಗೊಳಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಆದರೆ, ಇಂದು ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರುವ ಕ್ರೈಸ್ತ ಸಮುದಾಯ ಶಾಂತಿಯುತವಾಗಿ ಶಿಲುಬೆಯನ್ನ ಸ್ಥಳಾಂತರಿಸಿದೆ.

ಶಿಲುಬೆಯನ್ನು ಸ್ಥಳಾಂತರಿಸಿ ಕ್ರೈಸ್ತರ ಸ್ಮಶಾನದಲ್ಲಿ ಪೂಜೆ ಮಾಡಿ ಮತ್ತೊಮ್ಮೆ ಸಮಾಧಿ ಮಾಡಿದ್ದಾರೆ. ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿದರೂ ಆ ಜಾಗದಲ್ಲಿ ಯಾವುದೇ ಕಳೆಬರಹ ಸಿಗಲಿಲ್ಲ. ಹಾಗಾಗಿ, ಕ್ರೈಸ್ತರು ಸಮಾಧಿಯ ಮಣ್ಣನ್ನೇ ತೆಗೆದುಕೊಂಡು ಹೋಗಿ, ಮತ್ತೆ ಸಂಪ್ರದಾಯಬದ್ಧವಾಗಿ ಮಣ್ಣು ಮಾಡಿ ಅದರ ಮೇಲೆ ಶಿಲುಬೆಯನ್ನ ಪುನರ್ ಪ್ರತಿಷ್ಠಾಪಿಸಿದ್ದಾರೆ.