ಮೂಡಿಗೆರೆ: ಸರ್ಕಾರಿ ಶಾಲೆಗಳನ್ನು ಧಾನಿಗಳು ದತ್ತು ಪಡೆಯುವುದರಿಂದ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ : ಅರಣ್ಯಾಧಿಕಾರಿ ಆನಂದ್.

244
First suddi

ಕೊಟ್ಟಿಗೆಹಾರ: ಸರ್ಕಾರಿ ಶಾಲೆಗಳನ್ನು ಧಾನಿಗಳು ದತ್ತು ಪಡೆಯುವುದರಿಂದ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ ಎಂದು ಮೂಡಿಗೆರೆ ಉಪವಲಯ ಅರಣ್ಯಾಧಿಕಾರಿ ಆನಂದ್ ಹೇಳಿದರು.
ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ದತ್ತು ಸ್ವೀಕಾರ ಸಮಾರಂಭದ ವೇಳೆ ಶಾಲಾ ವನ ಉದ್ಘಾಟಿಸಿ ಮಾತನಾಡಿದರು.
ನೆರವನ್ನು ಸದ್ಬಳಕೆ ಮಾಡುವುದು ಮುಖ್ಯವಾದುದು. ಶಾಲೆಯಲ್ಲಿ ವನ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಇತರೆ ಕೆಲಸಗಳಿಗೂ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳು ಸ್ವಾವಲಂಬಿಯಾಗಿ ಕೆಲಸ ಮಾಡಲು ಕಲಿಯುತ್ತಾರೆ. ಅರಣ್ಯ ಇಲಾಖೆ ಎಲ್ಲ ಶಾಲೆಗಳಿಗೂ ಅರಣ್ಯ ವನ, ಶಾಲಾ ವನ, ಮಗುವಿಗೊಂದು ಮರ, ಶಾಲೆಗೊಂದು ವನ ಎಂಬ ಯೋಜನೆಯಂತೆ ಗಿಡಗಳನ್ನು ನೀಡುತ್ತಿದೆ ಎಂದರು.
ಶಾಲಾ ದತ್ತು ಪಡೆದ ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ಅಧ್ಯಕ್ಷ ಮುರಳಿ ಮಾತನಾಡಿ, ಈ ಶಾಲೆಗೆ ಸ್ಮಾರ್ಟ್ ಕ್ಲಾಸ್ ತರಗತಿಗೆ ಅಗತ್ಯವಿರುವ ಟಿ.ವಿ.ಸ್ಕ್ರೀನುಗಳನ್ನು ನೀಡಿದ್ದೇವೆ. ಸರ್ಕಾರಿ ಶಾಲೆಗಳು ಸೌಲಭ್ಯಗಳಿಗೆ ವಂಚಿತವಾಗಬಾರದು ಎಂಬುದು ನಮ್ಮ ಗುರಿಯಾಗಿದೆ. ಮುಂದೆಯೂ ಪ್ರೌಢಶಾಲೆಗೆ ಇನ್ನಷ್ಟು ನೆರವು ನೀಡಲು ಉದ್ದೇಶಿಸಿದ್ದೇವೆ. ನೀಡಿದ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ನಮಗೆ ಆತ್ಮ ತೃಪ್ತಿ ದೊರೆಯುತ್ತದೆ ಎಂದರು.
ಶಾಲಾ ಸಮಿತಿ ಅಧ್ಯಕ್ಷ ಸಂಜಯ್‍ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆ ಆಯ್ಕೆ ಮಾಡಿಕೊಂಡು ಶಾಲೆಯ ಶ್ರೇಯೋಭಿವೃದ್ದಿಗೆ ನೆರವು ನೀಡಿದ ಪ್ರತಿಬಿಂಬ ಟ್ರಸ್ಟ್ ಹಾಗೂ ಅರಣ್ಯ ಇಲಾಖೆಯ ನೆರವು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ಆನಂದ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಟಿ.ಎಂ.ಪ್ರಭಾವತಿ, ಗೆಳೆಯರ ಬಳಗದ ಅಧ್ಯಕ್ಷ ಎ.ಆರ್.ಅಭಿಲಾಷ್, ಜೇಸಿರೆಟ್ ನಿಕಟಪೂರ್ವ ಅಧ್ಯಕ್ಷೆ ಸ್ವಾತಿನವೀನ್, ಉಮೇಶ್‍ಬಾಳೂರು, ಕಾಂತರಾಜು, ಶಿಕ್ಷಕರಾದ ಕಿರಣ್‍ಕುಮಾರ್, ಯೋಗೀಶ್, ಕುಮಾರ್, ಸೌಮ್ಯ, ಕಮಲ, ತೃಪ್ತಿ, ಶೈನಿ, ಕವಿತ ಇದ್ದರು.