ಮೂಡಿಗೆರೆ : ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಬಿ ಹೊಸಳ್ಳಿ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಪ್ರತಿಭಟನೆ…

300
firstsuddi

ಕೊಟ್ಟಿಗೆಹಾರ : ಅತ್ಯಾಚಾರ ಮಾಡಿ ಹಿಂಸಾತ್ಮಕವಾಗಿ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕಿದೆ ಎಂದು ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಗೌರವಾದ್ಯಕ್ಷ ಜಯಪಾಲ್ ಹೇಳಿದರು.
ಬಿ ಹೊಸಳ್ಳಿಯ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಹತ್ರಾಸ್ ಮನಿಷಾ ವಾಲ್ಮೀಕಿ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಘಟನೆಗಳು ನಡೆದರೂ ಕೂಡ ತಪಿತಸ್ಥರ ಪರವಾಗಿ ನಿಂತ ಉತ್ತರ ಪ್ರದೇಶ ಸರ್ಕಾರ ಮುಖ್ಯಮಂತ್ರಿ ಆಡಳಿತವನ್ನು ರದ್ದುಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ತರಬೇಕು. ಈ ಪ್ರಕರಣಕ್ಕೆ ಸಂಬಂದಿಸಿದವರ ವಿರುದ್ದ ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಜೊತೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದರು.
ಆಚರಣಾ ಸಮಿತಿಯ ಸದಸ್ಯ ಶಿವಪ್ರಸಾದ್ ಮಾತನಾಡಿ ದೇಶದೆಲ್ಲೆಡೆ ಇಂದು ಬಡವರ ಮತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಪ್ರತಿನಿತ್ಯವೂ ಅತ್ಯಾಚಾರಗಳು, ಶೋಷಣೆಗಳು ನಡೆಯುತ್ತಿದ್ದರೂ ತಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಅಪರಾಧಿಗಳೀಗೆ ಸರ್ಕಾರವೆ ಬೆಂಬಲ ನೀಡುವ ಮೂಲಕ ಮತ್ತಷ್ಟು ಇಂತಹ ಘಟನೆಗಳು ನಡೆಯಲು ಪ್ರೇರಣೆ ನೀಡುತ್ತಿದೆ. ಇದು ಖಂಡನೀಯ ಎಂದರು.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಪತ್ರವನ್ನು ಬಿ ಹೊಸಳ್ಳಿ ಗ್ರಾ.ಪಂ ಪಿಡಿಓ ಶಮಿವುಲ್ಲಾ, ಅಧ್ಯಕ್ಷ ರವಿಗೌಡ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಕಾರ್ಯದರ್ಶಿ ನಿರಂಜನ್, ಖಜಾಂಚಿಯಾದ ಸುರೇಶ್, ಹಾಗೂ ಸಮಿತಿ ಪಧಾಧಿಕಾರಿಗಳು ಇದ್ದರು.