ಹಾವೇರಿ : ಉಕ್ರೇನ್ನಲ್ಲಿ ಮೃತಪಟ್ಟ ಕರ್ನಾಟಕದ ನವೀನ್ ನಿವಾಸಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಭೇಟಿ ನೀಡಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಕನ್ನಡಿಗ ನವೀನ್ ಸಾವನ್ನಪ್ಪಿದ್ದಾರೆ. ನವೀನ್ ನಮ್ಮ ಮೈಸೂರಿನಲ್ಲಿ ಓದಿದ ಹುಡುಗ. ಆತನ ಮೇಲೆ ತಂದೆ ತಾಯಿ ದೊಡ್ಡ ಆಸೆ ಇಟ್ಟುಕೊಂಡಿದ್ದರು. ದುರಾದೃಷ್ಟವಶಾತ್ ನವೀನ್ ಓದು ಮುಗಿಸಲಾಗಲಿಲ್ಲ. ಬಂಕರ್ ನಲ್ಲಿದ್ದವರಿಗೆ ತಿಂಡಿ ತರಲು ಹೋದ ವೇಳೆ ಶೆಲ್ ದಾಳಿಗೆ ಬಲಿಯಾಗಿದ್ದಾನೆ ಎಂದರು.
ನವೀನ್ ಮೃತ ದೇಹವನ್ನು ಭಾರತಕ್ಕೆ ತರುವ ಪ್ರಯತ್ನ ಮಾಡಬೇಕು. ಮೃತದೇಹ ತರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವೆ. ಕೋಳಿವಾಡರ ಪುತ್ರ ತಮ್ಮ ಕಂಪನಿಯ ವಿಮಾನದಲ್ಲಿ ಮೃತದೇಹ ತರಲು ಅನುಮತಿ ಕೇಳಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.










