ಮೆಗಾ ಡೈರಿ ಉದ್ಘಾಟಿಸಿದ ಅಮಿತ್ ಶಾ.

54
firstsuddi

ಮಂಡ್ಯ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಗ್ರಾಮದಲ್ಲಿ ಮೆಗಾ ಹಾಲಿನ ಡೈರಿಯನ್ನು ಉದ್ಘಾಟಿಸಿದರು.

ಮೆಗಾ ಡೈರಿ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಸಹಕಾರಿಗಳಿಗೆ, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಮಂಡ್ಯ ಮೆಗಾ ಡೈರಿ ಉದ್ಘಾಟನೆ ಆಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮಿಲ್ಕ್ ಫ್ಲಾಂಟ್ ನಿರ್ಮಾಣ ಆಗಿದೆ. ಪ್ರತಿದಿನ 10 ಲಕ್ಷ ಲೀ. ಹಾಲು ಸಂಸ್ಕರಣೆ ಆಗುತ್ತದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀ. ಸಂಸ್ಕರಣೆಗೆ ಒತ್ತು ನೀಡಲಾಗುವುದು. 1975ರಿಂದ ಇಲ್ಲಿಯವರೆಗೂ ಡೇರಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಿದೆ ಎಂದು ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಅಮೂಲ್ ಹಾಗೂ ನಂದಿನಿ ಒಟ್ಟಾಗಿ ಕೆಲಸ ಮಾಡಬೇಕಿದೆ. ಒಟ್ಟಿಗೆ ಕೆಲಸ ಮಾಡಿದರೆ ಎಲ್ಲ ಹಳ್ಳಿಗಳಲ್ಲಿ ಘಟಕ ಸ್ಥಾಪಿಸಬಹುದು. ಮೂರು ವರ್ಷದಲ್ಲಿ ಪ್ರತಿ ಪಂಚಾಯತಿಯಲ್ಲಿ ಡೈರಿ ಸ್ಥಾಪನೆಗೆ ಯೋಜನೆ ಮಾಡಿದ್ದು,ಈ ಮೂಲಕ ದೇಶದ ಎಲ್ಲಾ ರೈತರನ್ನು ಹಾಲಿನ ಕ್ರಾಂತಿ ಮೂಲಕ ಸೇರಿಸುತ್ತೇವೆ. ತಾಂತ್ರಿಕ ಸಹಕಾರ ಸೇರಿ ಎಲ್ಲಾ ಸಹಕಾರ ನೀಡಲು ನಾವು ಬದ್ದ ಎಂದರು.

ಸುಮಾರು 5 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾಡೈರಿಯಲ್ಲಿ ಹಾಲಿನ ಪುಡಿ ಉತ್ಪಾದನಾ ಘಟಕ, ಹಾಲು ಸಂಸ್ಕರಣಾ ಘಟಕಗಳಿವೆ. ಡೇರಿ ನಿರ್ಮಾಣಕ್ಕಾಗಿ 260 ಕೋಟಿ ರೂ. ವೆಚ್ಚವಾಗಿದ್ದು, ಕಟ್ಟಡದ ಹೊರಭಾಗದಲ್ಲಿ ಒಟ್ಟು 6 ಲಕ್ಷ ಲೀಟರ್ ಸಾಮರ್ಥ್ಯದ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್ ಗಳಿವೆ. ಪ್ರತಿ ಟ್ಯಾಂಕ್ ಗಳಲ್ಲಿ ತಲಾ 1.5 ಲಕ್ಷ ಲೀಟರ್ ಹಾಲು ಸಂಗ್ರಹ ಸಾಧ್ಯವಿದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ಮೆಗಾ ಡೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.