ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ – ಸಿಎಂ ಬೊಮ್ಮಾಯಿ ಹೇಳಿದ್ದೇನು?

56
firstsuddi

ಬೆಂಗಳೂರು : ಈ ಹಿಂದಿನಿಂದಲೂ ಕರ್ನಾಟಕದ ಮೇಕೆದಾಟು ಯೋಜನೆಯ ವಿಚಾರವಾಗಿ ಕ್ಯಾತೆ ತೆಗೆಯುತ್ತಾ ಬಂದಿರುವ ತಮಿಳುನಾಡು ಸರ್ಕಾರ, ಅಲ್ಲಿನ ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಣಯ ಮಂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ಕಾನೂನು ಬಾಹಿರ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ಪೊಲಿಟಿಕಲ್ ಸ್ಟಂಟ್ ಅಷ್ಟೇ. ಮೇಕೆದಾಟು ಯೋಜನೆ ಜಾರಿಗೆ ಬೇಕಾದ ಎಲ್ಲ ಕ್ರಮಗಳನ್ನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರಿಗೆ ಕಾವೇರಿ ಒಂದು ರಾಜಕೀಯ ದಾಳವಾಗಿದೆ. ಇದು ಇಂದಿನದಲ್ಲ, ಸ್ವಾತಂತ್ರ್ಯ ಬಂದಾಗಿನಿಂದಲೂ ಕಾವೇರಿ ವಿಚಾರವಾಗಿ ರಾಜಕೀಯ ಮಾಡುತ್ತಾ ಬರುತ್ತಿದ್ದಾರೆ. ಈಗಾಗಲೇ ನ್ಯಾಯಾಧೀಕರಣದ ಅದೇಶವಾಗಿದೆ. ನೀರು ಹಂಚಿಕೆ ಆಗುತ್ತಿದೆ. ನೀರಿನ ಹಂಚಿಕೆಯಾದ ಮೇಲೆ ನಾವು ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಹಾಕಿಕೊಂಡಿದ್ದೇವೆ. ಹೀಗಿದ್ದರೂ ಅವರು ಕುಡಿಯುವ ನೀರಿನ ಯೋಜನೆಗೆ ತಕರಾರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.