ಮೈಸೂರು : ನಗರದಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆ, ಅತ್ಯಾಚಾರ ಯತ್ನ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್ ಇದ್ದು, ಅತ್ಯಾಚಾರ ಯತ್ನ ನಡೆದಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಬಂಧಿತ ಆರೋಪಿ ಹಾಗೂ ಸಂತ್ರಸ್ತ ಯುವತಿ ಪರಿಚಯಸ್ತರಾಗಿದ್ದರು. ಆರೋಪಿಯನ್ನು ಯುವತಿಯೇ ಹಾಸ್ಟೆಲ್ ಗೆ ಬರುವುದಕ್ಕೆ ಹೇಳಿದ್ದಾಳೆ. ಯಾರೂ ಇಲ್ಲದ ವೇಳೆ ಇವರಿಬ್ಬರನ್ನು ಸಹಪಾಠಿಗಳು ಬಂದು ನೋಡಿದ್ದಾರೆ. ಆಗ ಯುವಕ ಎಸ್ಕೇಪ್ ಆಗಿದ್ದಾನೆ.
ತಮ್ಮ ಸಮುದಾಯದ ಹಿರಿಯರಿಗೆ ಗೊತ್ತಾದರೆ ತೊಂದರೆ ಆಗುತ್ತೆ ಅಂತ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ಯಾಚಾರ ಯತ್ನ ಹಾಗೂ ಹಲ್ಲೆ ಕಥೆ ಕಟ್ಟಿದ್ದಾಳೆ. ನಾನು ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ನೀನು ತಪ್ಪಿಸಿಕೋ ಅಂತ ಯುವತಿ ಸುಳಿವು ಕೊಟ್ಟಿದ್ದಳು ಎಂದು ಯುವಕ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಪ್ರಕರಣದ ಹಿನ್ನಲೆ :
ನಗರದ ಆರ್.ಎಸ್.ನಾಯ್ಡು ನಗರದ ಹೋಲಿ ಕ್ರಾಸ್ ಸ್ಡಡಿ ಹೌಸ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಹಲ್ಲೆ ಮತ್ತು ಅತ್ಯಾಚಾರ ಯತ್ನ ನಡೆದಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ 4 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.










