ಮೈಸೂರು : ನಗರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದ್ದು, ಅತ್ಯಾಚಾರ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಬಂಧಿತರಾಗಿರುವ ಐವರು ಆರೋಪಿಗಳು ತಮಿಳುನಾಡಿನ ತಿರ್ಪೂರು ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ, 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ. ಡ್ರೈವರ್, ಕಾರ್ಪೆಂಟರ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬ ಬಾಲಕ ಅಪ್ರಾಪ್ತನಾಗಿದ್ದು, 17 ವರ್ಷದವನಿದ್ದಾನೆ ಎನ್ನುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಆದರೆ, ಅದು ಹೆಚ್ಚಿನ ತನಿಖೆಯಿಂದಲೇ ಗೊತ್ತಾಗಬೇಕು ಎಂದಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನಿಂದ 3 ಲಕ್ಷ ಬೇಡಿಕೆ ಇಟ್ಟಿದ್ದು, ಹಣ ನೀಡದ ಕಾರಣ ಅತ್ಯಾಚಾರ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲರೂ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ವಾಪಸ್ಸು ಹೋಗುವಾಗ ಕುಡಿದು ಪಾರ್ಟಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವೈಜ್ಞಾನಿಕ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನವಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.










