ಹುಬ್ಬಳ್ಳಿ: ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಬಾದಾಮಿಯ ಬನಶಂಕರಿ ದೇವಿ ಜಾತ್ರೆಗಳಿಗೆ ತೆರಳುವ ಭಕ್ತಾದಿಗಳು ಹಾಗೂ ಇತರ ಸಾರ್ವಜನಿಕರ ಅನುಕೂಲಕ್ಕಾಗಿ ಜ.11 ರಿಂದ 18ರ ವರೆಗೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಲಾಗಿದೆ. ಬನದ ಹುಣ್ಣಿಮೆ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡ ಹಾಗೂ ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇವಿ ಜಾತ್ರೆಗಳು ಇವತ್ತಿನಿಂದ ಇದೇ ತಿಂಗಳ 18ರವರೆಗೆ ವೈಭವದಿಂದ ಜರುಗಲಿವೆ. ಹುಬ್ಬಳ್ಳಿ – ಧಾರವಾಡ ಅವಳಿ ನಗರ, ನವಲಗುಂದ ಹಾಗೂ ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ಹೋಗಿ ಬರುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡ ಮತ್ತು ಬನಶಂಕರಿಗೆ ನೇರ ವಿಶೇಷ ಜಾತ್ರಾ ಬಸ್‍ಗಳು ಸಂಚರಿಸಲಿವೆ. ಇಂದು, ನಾಳೆ ಹಾಗೂ ಸೋಮವಾರ ರಥೊತ್ಸವ ನಡೆಯಲಿದೆ. ಜನವರಿ 14ರಂದು ದೇವಿಯ ವಾರ ಮತ್ತು ಮಕರ ಸಂಕ್ರಾಂತಿ ಸಾರ್ವಜನಿಕ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಓಡಾಟ ನಿರೀಕ್ಷಿಸಲಾಗಿದೆ.










