ಯಾವುದೇ ಕಾರ್ಯಕ್ರಮಗಳಿಂದ ಕನ್ನಡ ಬೆಳೆಯುವುದಿಲ್ಲ, ಕನ್ನಡಿಗರಾದ ನಾವು ಅದನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸಬೇಕು: ಡಾ.ಜಿ.ಎಂ.ಗಣೇಶ್

57
firstsuddi

ಚಿಕ್ಕಮಗಳೂರು: ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಭಕ್ತ ಶ್ರೇಷ್ಠ ಶ್ರೀಕನಕದಾಸರ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಂದು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಎಲ್.ಎಂ.ಎನ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಜಿ.ಎಂ.ಗಣೇಶ್, ಸರ್ಕಾರಗಳು ಸಂಘ ಸಂಸ್ಥೆಗಳು ರಾಜ್ಯೋತ್ಸವ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಂದ ಕನ್ನಡ ಬೆಳೆಯುವುದಿಲ್ಲ. ಕನ್ನಡಿಗರಾದ ನಾವು ಅದನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸಿದಾಗ ಮಾತ್ರ ಅದು ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು.

ಭಕ್ತಶ್ರೇಷ್ಠ ಶ್ರೀ ಕನಕದಾಸರು ಭಕ್ತಿಯ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬಹುದು ಎಂಬುದನ್ನು ಸಾರಿದ ಮಹತ್ಮರು, ಅವರ ಕೃತಿಗಳು ಸಾರ್ವಕಾಲಿಕ ಸತ್ಯಗಳು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವಿನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್.ಆರ್.ಪವನ್‍ಕುಮಾರ್, ಕನಕದಾಸರ ಬದುಕು, ಸಂದೇಶ ಮತ್ತು ಅವರ ಕೃತಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ಬದುಕಿಗಾಗಿ ಯಾವುದೇ ಭಾಷೆಯನ್ನು ಬೇಕಾದರೂ ಕಲಿಯಿರಿ. ಆದರೆ, ಮಾತೃಭಾಷೆಯಲ್ಲಿ ಮಾತ್ರ ವ್ಯವಹರಿಸುವ ಮೂಲಕ ಅದನ್ನು ಉಳಿಸಿ ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ರಾಜ್ಯೋತ್ಸವ ಮತ್ತು ಕನಕ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಹಾಗೂ ಕನಕದಾಸರ ಕೃತಿಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಪ ಪ್ರಾಂಶುಪಾಲೆ ಕುಮುದಾ ಎಂ.ಕಿಣಿ, ವಿದ್ಯಾರ್ಥಿಗಳಾದ ರಕ್ಷಾ, ಶಿಲ್ಪ, ನಿಶ್ಚಿತ, ಪೃಥ್ವಿ ಉಪಸ್ಥಿತರಿದ್ದರು.