ತಮಿಳು ಚಿತ್ರರಂಗದ ನಟ ಹಾಗೂ ಸಹಾಯಕ ನಿರ್ದೇಶಕ ಶರಣ್ ರಾಜ್ ಅವರು ಚೆನ್ನೈನ ಕೆಕೆ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ 11.30ರ ಸುಮಾರಿಗೆ ಶರಣ್ ರಾಜ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪೋಷಕ ನಟ ಪಳನಿಪ್ಪನ್ ಎನ್ನುವವರು ಶರಣ್ ರಾಜ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣದಿಂದಾಗಿ ಶರಣ್ ರಾಜ್ ನಿಧನರಾಗಿದ್ದಾರೆ.
ಕಾರು ಓಡಿಸಿಕೊಂಡು ಬರುತ್ತಿದ್ದ ಪೋಷಕ ನಟ ಪಳನಿಪ್ಪನ್ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಶರಣ್ ರಾಜ್ ಬೈಕ್ ಗೆ ಕಾರು ಗುದ್ದಿದ್ದರಿಂದ, ಅವರು ನೆಲಕ್ಕೆ ಉರುಳಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೂ ಪ್ರಯೋಜನವಾಗಿಲ್ಲ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪಳನಿಪ್ಪನ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶರಣ್ ರಾಜ್ ಅವರ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಹಸ್ತಾಂತರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪಳನಿಪ್ಪನ್ ಪೊಲೀಸರ ಎದುರು ಹಾಜರಾಗಿದ್ದಾರೆ ಎನ್ನಲಾಗಿದೆ. ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತಕ್ಕೆ ಬಲಿಯಾದ ಶರಣ್ ರಾಜ್ ಗೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಶರಣ್ ರಾಜ್ ಪ್ರತಿಭಾವಂತ ಸಹಾಯಕ ನಿರ್ದೇಶಕ. ದಕ್ಷಿಣ ಭಾರತದಲ್ಲಿ ವೆಟ್ರಿಮಾರನ್ಗೆ ಸಾಕಷ್ಟು ಹೆಸರು ಇದೆ. ಅವರಿಗೆ ಸಹಾಯಕರಾಗಿ ಶರಣ್ ರಾಜ್ ಅವರು ಇದ್ದರು. ವೆಟ್ರಿಮಾರನ್ ಅವರು ‘ವಡಾ ಚೆನ್ನೈ’ ‘ಅಸುರನ್’ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಅಸುರನ್’ ಸಿನಿಮಾದಲ್ಲಿ ಶರಣ್ ರಾಜ್ ಅವರು ಸಹಾಯಕ ನಿರ್ದೇಶಕರಾಗಿದ್ದರು. ಜೊತೆಗೆ ಒಂದು ಪಾತ್ರದಲ್ಲಿಯೂ ನಟಿಸಿದ್ದರು.










