ಉಡುಪಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದಿರುವ ಸಿದ್ದರಾಮಯ್ಯ ಅವರು ತಮ್ಮ ಹಗಲುಕನಸನ್ನು ನಿಲ್ಲಿಸಲಿ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ, ಬಂದರು ಒಳನಾಡು ಸಾರಿಗೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಅವರು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ರಾಜ್ಯದ ಎಲ್ಲಾ ಸಂಕಷ್ಟದ ಕಾಲದಲ್ಲಿ ಯಡಿಯೂರಪ್ಪ ಸಮರ್ಥವಾಗಿ ಅಧಿಕಾರ ನಿರ್ವಹಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಲ್ಲಾವುದ್ದಿನ ಯಾವ ಅದ್ಭುತ ದೀಪ ಮಾಹಿತಿ ಕೊಟ್ಟಿದೆಯೋ ಗೊತ್ತಿಲ್ಲ. ಬಿಎಸ್ ವೈ ರಾಜ್ಯದ ಸರ್ವೋಚ್ಚ ಮುಖಂಡರಾಗಿದ್ದು ಅವರೇ ಶಾಶ್ವತ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅಲ್ಲದೆ ಕೇಂದ್ರ ಮತ್ತು ರಾಜ್ಯದ ಎಲ್ಲ ನಾಯಕರ ಸಹಮತ ಯಡಿಯೂರಪ್ಪ ಅವರಿಗೆ ಇದೆ ಎಂದರು.
ಉಪಚುನಾವಣೆ ನಂತರ ಡಿಕೆಶಿ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಸಚಿವ ಕೋಟ, ಕಾಂಗ್ರೆಸ್ನ ಆಂತರಿಕ ವಿಚಾರದಲ್ಲಿ ನಾವು ಮೂಗು ತೂರಿಸಲ್ಲ ಆದರೆ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಡಿಕೆಶಿಗೆ ಮಾಹಿತಿ ಸಿಕ್ಕಿರಬಹುದು ಅಥವಾಡಿಕೆಶಿ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡಿರಬಹುದು ಆದ್ದರಿಂದ ಸಿದ್ದರಾಮಯ್ಯನ ಮೇಲೆ ದೂರು ಕೊಡಲು ದೆಹಲಿ ಪ್ರವಾಸ ಮಾಡಿರಬಹುದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದರು.
ವಿಜಯೇಂದ್ರ ಚುನಾವಣಾ ರಾಜಕೀಯಕ್ಕೆ ಆಗಮನ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ ಚುನಾವಣೆ ಮತ್ತು ಪಕ್ಷ ಸಂಘಟನೆಯಲ್ಲಿ ವಿಜಯೇಂದ್ರ ಸಕ್ರಿಯರಾಗಿ ಕೆಲಸ ಮಾಡುತ್ತಾರೆ. ವಿಜಯೇಂದ್ರ ಚುನಾವಣೆ ರಾಜಕೀಯ ಪ್ರವೇಶ ಬಗ್ಗೆ ರಾಜ್ಯ ಮತ್ತು ಕೇಂದ್ರದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸದ್ಯ ವಿಜಯೇಂದ್ರ ಅವರು ಪಕ್ಷದ ಉಪಾಧ್ಯಕ್ಷರಾಗಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ವಿಜಯೇಂದ್ರ ಚೆನ್ನಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಂಘಟನಾತ್ಮಕ ಕೆಲಸದಲ್ಲಿ ವಿಜಯೇಂದ್ರ ಚೆನ್ನಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ವಿಜಯೇಂದ್ರ ರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದರು.










