ರಿಷಭ್ ಪಂತ್ ಮೊಣಕಾಲು, ಪಾದ, ಬೆನ್ನಿಗೆ ಗಾಯ – ಆರೋಗ್ಯ ಸ್ಥಿತಿ ಸ್ಥಿರವಾಗಿದೆ : ಬಿಸಿಸಿಐ

86
firstsuddi

ಮುಂಬೈ : ಭಾರತೀಯ ನಿಯಂತ್ರಣ ಮಂಡಳಿ (ಬಿಸಿಸಿಐ) ರಿಷಭ್ ಪಂತ್ ಆರೋಗ್ಯದ ಕುರಿತು ಮಾಧ್ಯಮ ವರದಿ ಬಿಡುಗಡೆಗೊಳಿಸಿದೆ.

ಉತ್ತರಾಖಂಡದ ರೂರ್ಕಿ ಬಳಿ ಇಂದು ಮುಂಜಾನೆ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಗಾಯಗೊಂಡ ಪಂತ್ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಥರ್ಮಾ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಷಭ್ ಅವರ ಹಣೆಗೆ ಎರಡು ಸ್ಟಿಚ್ ಹಾಕಲಾಗಿದೆ. ಅವರ ಬಲ ಮೊಣಕಾಲಿನ ಬಳಿ ಹರಿದ ಗಾಯಗಳಾಗಿದೆ. ಬಲ ಮಣಿಕಟ್ಟು, ಪಾದ, ಪಾದದ ಬೆರಳಿಗೆ ಗಾಯವಾಗಿದೆ.

ಬೆನ್ನಿಗೂ ಉಚ್ಚಿದಂತಿರುವ ಸುಟ್ಟಗಾಯದಂತಿದೆ. ರಿಷಭ್ ನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಈಗ ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಮುಂದಿನ ಚಿಕಿತ್ಸೆಗಾಗಿ ಎಂಆರ್‍ಐ ಸ್ಕ್ಯಾನ್ ಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.

ರಿಷಭ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರಸ್ತುತ ರಿಷಭ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದೇವೆ. ರಿಷಭ್ ಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಸಹಕರಿಸುತ್ತೇವೆ ಎಂದು ಬಿಸಿಸಿಐ ತಿಳಿಸಿದೆ.

ಹಮ್ಮದ್ ಪುರ ಝಾಲ್ ನ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಪಂತ್ ತಲೆಯಲ್ಲಿ ರಕ್ತ ಸುರಿಯುತ್ತಿದ್ದರೆ, ಬೆನ್ನಿನಲ್ಲಿ ಬೆಂಕಿಯಿಂದ ಸುಟ್ಟ ಗಾಯಗಳಾಗಿದೆ.

ರಿಷಭ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್ ಕೊಡಬೇಕು, ತಾಯಿಯೊಂದಿಗೆ ಹೊಸ ವರ್ಷದ ಸಂಭ್ರಮ ಕಳೆಯಬೇಕು ಎಂದು ಮರ್ಸಿಡೀಸ್ ಎಎಂಜಿ ಜಿಎಲ್ ಇ-43 ಕೂಪೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿದ್ದೆಗೆ ಜಾರಿದಂತಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಕಾರಿನ ಕಿಟಕಿ ಗಾಜನ್ನು ಒಡೆದು ಪಂತ್ ಹೊರಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಪಂತ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.