ಚಿಕ್ಕಮಗಳೂರು : ರೈತರ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ, ಲಾಕ್‍ಡೌನ್ ವಿಧಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಒತ್ತಾಯಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿದ ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ವರ್ಷ ಗಳಿಂದ ರಾಜ್ಯದ ರೈತರು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ನಾನಾ ಕಷ್ಟಗಳನ್ನು ಅನುಭವಿಸಿ ಹೈರಾಣಾಗಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್ ಹೇಳಿದ್ದಾರೆ.
ಇದರ ಜೊತೆಗೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ರೈತರು ಸಾಕಷ್ಟು ಬೆಳೆನಷ್ಟ ಅನುಭವಿಸಿದ್ದಾರೆ. ಇದೀಗ ಮಳೆನಿಂತಿರುವುದರಿಂದಾಗಿ ಅಲ್ಪಸ್ವಲ್ಪ ಬೆಳೆ ಉಳಿಸಿಕೊಂಡು ತುಸು ನೆಮ್ಮದಿ ಕಾಣುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈಗ ಏಕಾಏಕಿ ವೀಕೆಂಡ್ ಕಫ್ರ್ಯೂ ಅಥವಾ ಲಾಕ್‍ಡೌನ್ ಜಾರಿಗೊಳಿಸಿದರೆ ರೈತರು ಬೆಳೆದ ಬೆಳೆಯನ್ನು ನಗರದ ಮಾರುಕಟ್ಟೆಗೆ ತಂದು ಮಾರಲಾಗದೆ ಮತ್ತೆ ಸಂಕಷ್ಟಕ್ಕೊಳಗಾಗುತ್ತಾರೆ. ಸಾಲಸೋಲ ಮಾಡಿ ಬೆಳೆ ಬೆಳೆದಿರುವ ರೈತರು ಹಣವಿಲ್ಲದೆ ಬೀದಿಗೆ ಬೀಳುತ್ತಾರೆ ಎಂದು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ವೀಕೆಂಡ್ ಕರ್ಫ್ಯೂ, ಲಾಕ್‍ಡೌನ್ ನಿರ್ಧಾರ ಕೈಬಿಟ್ಟು ಕೊರೊನಾ ನಿಯಂತ್ರಣಕ್ಕೆ ಬೇರೆ ಮಾರ್ಗವನ್ನು ಹುಡುಕಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ನಿಯಂತ್ರಣ ಎಷ್ಟು ಮುಖ್ಯವೊ ಅಷ್ಟೇ ಜನರ ಜೀವನವೂ ಮುಖ್ಯ ಎಂಬುದನ್ನು ಸರ್ಕಾರ ಮನಗಾಣಬೇಕು. ಜನರ ಬದುಕಿನ ಮೇಲೆ ಬರೆ ಎಳೆಯುವ ಕಾರ್ಯವನ್ನು ಕೈಬಿಡಬೇಕು. ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.










