ರೈತರಿಗೆ ಗುಡ್ ನ್ಯೂಸ್ ; ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ…

62
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಕಂತಿನಲ್ಲಿ ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಿದರು. ಅಲ್ಲದೇ, ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್ ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ್ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು. ರೈತರನ್ನು ಮತ್ತು ಕೃಷಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂದು ದೇಶದಲ್ಲಿ 600ಕ್ಕೂ ಹೆಚ್ಚು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು ಆರಂಭಗೊಂಡಿವೆ ಎಂದು ಹೇಳಿದರು.

ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ:
ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು 2019ರ ಫೆಬ್ರವರಿ 24 ರಂದು ಜಾರಿಗೊಳಿಸಲಾಯಿತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ 11 ಕಂತುಗಳಲ್ಲಿ ರೈತರ ಖಾತೆಗೆ ಹಣ ಬಿಡುಗಡೆಗೊಳಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕೊನೆಯ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು.