ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಮಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ…

64
firstsuddi

ಬೆಂಗಳೂರು: ಮದುವೆಯಾಗಿದ್ದರೂ ಪತಿಯಿಂದ ದೂರವಾಗಿ ಪ್ರಿಯತಮನ ಜೊತೆ ಲಿವಿಂಗ್ ಟುಗೆದರ್​ನಲ್ಲಿದ್ದ ಪ್ರೇಮಿಗಳಿಬ್ಬರು ಒಟ್ಟಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ (20) ಹಾಗೂ ಹೋಂ ನರ್ಸ್ ಮಾಡುತ್ತಿದ್ದ ಕೇರಳ ಮೂಲದ ಅಭಿಲ್ ಅಬ್ರಹಾಂ (29) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಮೃತ ಸೌಮಿನಿ ದಾಸ್ ವಿವಾಹವಾಗಿದ್ದು, ನರ್ಸಿಂಗ್ ವಿದ್ಯಾಭ್ಯಾಸ ಸಂಬಂಧ ನಗರದಲ್ಲಿ ವಾಸವಾಗಿದ್ದಳು. ಆ ಸಂದರ್ಭದಲ್ಲಿ ಕೇರಳ ಮೂಲದ ಹೋಂ-ನರ್ಸಿಂಗ್ ಕೆಲಸ ಮಾಡುತ್ತಿದ್ದ ಅಭಿಲ್ ಅಬ್ರಹಾಂ ಪರಿಚಯವಾಗಿದೆ. ತದನಂತರದಲ್ಲಿ ಅಬ್ರಹಾಂ ಜೊತೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರು ದೊಡ್ಡಗುಬ್ಬಿ ಗ್ರಾಮದ ಡಿಎಸ್ ಮ್ಯಾಕ್ಸ್ ಸ್ಟ್ರಿಂಗ್ ಫೀಲ್ಡ್ ಅಪಾರ್ಟ್‍ಮೆಂಟ್‍ನ ನಾಲ್ಕನೇ ಮಹಡಿಯ ಬಿ ಬ್ಲಾಕ್ ಪ್ಲಾಟ್ ನಂ. 422ರಲ್ಲಿ ವಾಸವಾಗಿ ಸಹಜೀವನ ನಡೆಸುತ್ತಿದ್ದರು.

ಸೌಮಿನಿ ದಾಸ್ ಮೂರು ತಿಂಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಳು. ಆ ವೇಳೆ ಗಂಡನ ಜೊತೆ ಜಗಳ ಮಾಡಿಕೊಂಡಿದ್ದಳು. ನಿನ್ನ ಜೊತೆ ನಾನು ಇರುವುದಿಲ್ಲ. ನನ್ನ ತಂಟೆಗೆ ಬರಬೇಡ. ನಾನು ಮತ್ತೆ ಬರುವುದಿಲ್ಲ ಎಂದು ಗಂಡನಿಗೆ ಹೇಳಿ ಬೆಂಗಳೂರಿಗೆ ಬಂದಿದ್ದಳು. ಪತ್ನಿಯ ನಡೆಯಿಂದ ಅನುಮಾನಗೊಂಡು ವಿಚಾರಿಸಿದಾಗ ಆಕೆಯ ಲಿವ್ ಇನ್ ರಿಲೇಷನ್ ಶಿಪ್​ನಲ್ಲಿರುವ ಸಂಗತಿ ಬೆಳಕಿಗೆ ಬಂದಿತ್ತು. ಆಗ ಪತಿ, ಸೌಮಿನಿ ದಾಸ್​ಗೆ ತರಾಟೆಗೆ ತೆಗೆದುಕೊಂಡಿದ್ದರು.

ತಮ್ಮ ಪ್ರೀತಿ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಅವರು ನಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ತಿಳಿದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದು ಕೊತ್ತನೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.