ವಿಜಯೇಂದ್ರ ಜೊತೆ ಯಾವುದೇ ಒಳ ಒಪ್ಪಂದವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ.

58

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜೊತೆಗೆ ಒಳ ಒಪ್ಪಂದವಿದೆ ಎಂಬ ಆರೋಪವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ನಿರಾಕರಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಜಯೇಂದ್ರ ಅವರ ಪ್ರಬಲ ವಿರೋಧಿ, ಅವರನ್ನು ಹಲವು ಬಾರಿ ವಿರೋಧಿಸಿದ್ದೇನೆ. ಅವರು ಯಾವಾಗಲೂ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಟೀಕಿಸುತ್ತಾರೆ. ರಾಜ್ಯ ಸರ್ಕಾರ ದಿವಾಳಿಯಾಗಿಲ್ಲ. ಸ್ವತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿವಾಳಿಯಾಗಿದ್ದಾರೆಂದು ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಅವರು ಮೊದಲು ತಮ್ಮ ಪಕ್ಷದ ದಿವಾಳಿತನ ಬಗ್ಗೆ ಮಾತನಾಡಲಿ. ಪಾಪರ್ ಸರ್ಕಾರ ಎಂದು ಸುಮ್ಮನೇ ವ್ಯಂಗ್ಯ ಮಾಡುವುದಲ್ಲ.. ಮುಂದಿನ ಶನಿವಾರ ಕಲ್ಯಾಣ ಕರ್ನಾಟಕದಲ್ಲಿ 1000 ಕೋಟಿ ರೂಪಾಯಿ ವೆಚ್ಚದ ರಸ್ತೆಗಳ ಅಭಿವೃದ್ಧಿಯ ಕಲ್ಯಾಣ ಪಥ ಉದ್ಘಾಟನೆ ಮಾಡುತ್ತಿದ್ದೇವೆ. ಅವರಿಗೂ ಕರೆಯುತ್ತೇವೆ. ಅವರೂ ಬರಲಿ ಎಂದು ಸವಾಲು ಹಾಕಿದರು. ಅಂಕಿ ಅಂಶ ತೋರಿಸಿ ವಿಜಯೇಂದ್ರ ಮಾತನಾಡಲಿ. ಸಾಲ ಮಾಡಿ ತುಪ್ಪಾ ತಿಂದಿರುವವರು ಅವರು. ಆದರೆ ಸಾಲದ ಬಡ್ಡಿ ಕಟ್ಟುತ್ತಿರುವವರು ನಾವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿದ್ದಕ್ಕಾಗಿ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ನಿಷೇಧಾಜ್ಞೆ ಹೇರುವಿಕೆಯನ್ನು ಯಾವ ಬಣ ವಿರೋಧಿಸುತ್ತಿದೆ. ಪ್ರತಿಭಟನೆ ನಡೆಸುತ್ತಿರುವುದು ಅಧಿಕೃತ ಬಿಜೆಪಿಯೋ ಅಥವಾ ಅನಧಿಕೃತ ಬಿಜೆಪಿಯಿಂದ ಪ್ರತಿಭಟನೆ ನಡೆಯುತ್ತಿದೆಯೋ ಎಂಬುದು ತಿಳಿಯುತ್ತಿಲ್ಲ. ಇದು ಬಿಜೆಪಿ ಬಣ ಪಾಲಿಟೆಕ್ಸ್ ಎತ್ತಿ ತೋರಿಸುತ್ತದೆ. ವಕ್ಫ್ ವಿಚಾರದಲ್ಲಿ ಒಂದು ಬಣ ಪ್ರತಿಭಟನೆ ಮಾಡುತ್ತದೆ ಎಂದು ಹೇಳಿದರು, ಆದರೆ ಮಾಡಲಿಲ್ಲ. ದರ ಹೆಚ್ಚಳ ಬಗ್ಗೆ ಇನ್ನೊಂದು ಬಣ ಪ್ರತಿಭಟನೆ ಮಾಡುತ್ತದೆ ಎಂದರು, ಅದೂ ಮಾಡಲಿಲ್ಲ. ಈಗ ಯಾವ ಬಣದವರು ಮಾಡುತ್ತಿದ್ದಾರೆ ಮೊದಲು ಹೇಳಬೇಕು. ಅದಲ್ಲದೆ ಎಲ್ಲಾ ಮುಗಿದ ಮೇಲೆ ಅಲ್ಲಿಗೆ ಹೋಗುತ್ತಿರುವುದಾದರೂ ಯಾಕೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದಕ್ಕಾಗಿಯೇ ಅಲ್ಲಿಗೆ ಹೋಗುತ್ತಿರುವುದು ಎಂದು ಪ್ರಿಯಾಂಕ್ ಖರ್ಗೆ ಅವರು ಟೀಕಿಸಿದರು.