ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ…

61

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಇಂದು ರಾಜೀನಾಮೆ ನೀಡಿದ್ದಾರೆ.

ಇಂದು ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ ಅವರು, ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾಳೆ ಸಂಜೆ 5 ಗಂಟೆಗೆ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದರು.

ಸತತವಾಗಿ ಏಳು ಅವಧಿಗೆ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ. ಎರಡು ತಲೆಮಾರಿನ ಜನ ನನಗೆ ಮತ ಹಾಕಿದ್ದಾರೆ. ಶಿಕ್ಷಕರು ನನ್ನನ್ನು ಈ ಹಂತಕ್ಕೆ ತಂದಿದ್ದಾರೆ. 1983ರಲ್ಲಿ ಪಕ್ಷೇತರನಾಗಿ ಸದಸ್ಯನಾಗಿದ್ದೆ, 1986ರಲ್ಲಿ ಜನತಾದಳದಿಂದ ಆರಿಸಿ ಬಂದೆ. ಲೋಕಶಕ್ತಿ, ಜೆಡಿಎಸ್​​ ನಿಂದ ಆರಿಸಿ ಬಂದೆ. ದೇವೇಗೌಡರು ಮಾರ್ಗದರ್ಶನ ಮಾಡಿದರು. ಕುಮಾರಸ್ವಾಮಿ ಬೆಂಬಲ ಮರೆಯಲಾಗಲ್ಲ ಎಂದರು.

ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸ ನನಗಿತ್ತು. ಕ್ಷೇತ್ರದ ಶಿಕ್ಷಕ ಮತದಾರರ ಆಸೆಯಂತೆ ಈ ನಿರ್ಧಾರ ಕೈಗೊಂಡಿದ್ದೇನೆ. ಸಭಾಪತಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದೇನೆ. ಬೇರೆ ಬೇರೆ ಇಲಾಖೆಗಳ 30 ಸಭೆಗಳನ್ನು ನಡೆಸಿದ್ದೇನೆ. ಹೊಸ ಶಾಸಕರಿಗೆ ತರಬೇತಿ ಕೊಟ್ಟಿದ್ದೇನೆ. ಸದನವನ್ನ ಅಜೆಂಡಾದಂತೆ ಮಾಡಿದ್ದೇವೆ. ಶೇ. 90ರಷ್ಟು ಸದನವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಧರಣಿಗಳ ನಡುವೆ ಉತ್ತಮವಾಗಿ ನಡೆಸಿದ್ದೇವೆ ಎಂದರು.