ವಿಧಾನಪರಿಷತ್ ನ 14 ಕಾಂಗ್ರೆಸ್ ಸದಸ್ಯರು ಅಮಾನತು…

94
firstsuddi

ಬೆಳಗಾವಿ : ವಿಧಾನಪರಿಷತ್ ನ 14 ಕಾಂಗ್ರೆಸ್ ಸದಸ್ಯರ ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.

ಜಮೀನು ಕಬಳಿಕೆ ಆರೋಪ ಪ್ರಕರಣದ ವಿಚಾರ ಹೈಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ ಚರ್ಚೆ ಬೇಡ ಎಂದು ಸಭಾಪತಿ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ವೇಳೆ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು.

ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗುತ್ತಾ ಭಿತ್ತಿಪತ್ರ ಹಿಡಿದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದನದ ಬಾವಿಗಿಳಿದು ಧರಣಿ ನಡೆಸಿದರು. ಭೈರತಿ ಬಸವರಾಜ ರಾಜೀನಾಮೆಗೆ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ವಿ.ಸೋಮಣ್ಣ ಸಭಾಪತಿ ಈಗಾಗಲೇ ರೂಲಿಂಗ್ ನೀಡಿದ್ದಾರೆ. ಸದನ ಉತ್ತಮವಾಗಿ ನಡೆಸಬೇಕು. ಕೋರ್ಟ್ ನಲ್ಲಿರುವ ಪ್ರಕರಣ ಇಲ್ಲಿ ಚರ್ಚೆ ಮಾಡಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ ಸದನ ನಡೆಯಲು ಅವಕಾಶ ನೀಡಿವಂತೆ ಮನವಿ ಮಾಡಿದರು.

ಧರಣಿ ನಿಲ್ಲಿಸದ ಕಾಂಗ್ರೆಸ್ ಸದಸ್ಯರನ್ನು ಒಂದು ದಿನ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಹೊರಟ್ಟಿ ಆದೇಶ ಹೊರಡಿಸಿದರು. ಅಮಾನತುಗೊಳಿಸಿದರೂ ಕಾಂಗ್ರೆಸ್ ಸದಸ್ಯರು ಸದನದಲ್ಲೇ ಧರಣಿ ಮುಂದುವರಿಸಿದರು. ಹೀಗಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಸದಸ್ಯರಾದ ಎಸ್.ಆರ್ ಪಾಟೀಲ್, ಎನ್ ನಾರಾಯಣಸ್ವಾಮಿ, ಪಿ ಆರ್ ರಮೇಶ್, ಬಿ.ಕೆ. ಹರಿಪ್ರಸಾದ್, ಪ್ರತಾಪ್ ಚಂದ್ರ ಶೆಟ್ಟಿ, ಯು ಬಿ ವೆಂಕಟೇಶ, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ, ಹರೀಶ್ ಕುಮಾರ್, ನಜೀರ್ ಅಹ್ಮದ್, ಆರ್.ಬಿ. ತಿಮ್ಮಾಪೂರ್, ಬಸವರಾಜ್ ಪಾಟೀಲ್ ಇಟಗಿ, ವಿ.ಆರ್. ರಮೇಶ್, ಗೋಪಾಲಸ್ವಾಮಿ ಅವರನ್ನು ಅಮಾನತುಗೊಳಿಸಲಾಯಿತು.