ಚೆನ್ನೈ: ಬಾಲಕಿಯೊಬ್ಬಳನ್ನು ಹಸುವೊಂದು ಕೊಂಬಿನಿಂದ ಎತ್ತಿ ಎಸೆದು ಹಿಗ್ಗಾಮುಗ್ಗಾ ತುಳಿದಾಡಿದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಗಾಯಗೊಂಡ ಬಾಲಕಿಯನ್ನು ಆಯಿಷಾ (9) ಎಂದು ಗುರುತಿಸಲಾಗಿದೆ. ಸದ್ಯ ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಹಸು ದಾಳಿ ಮಾಡುವ ದೃಶ್ಯವು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಯಿಷಾ ಬುಧವಾರ ಸಂಜೆ ತನ್ನ ತಾಯಿ ಹಾಗೂ ತಮ್ಮನೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಅದೇ ದಾರಿಯಲ್ಲಿ ಬಾಲಕಿ ಸಾಗಿ ಬರುವುದಕ್ಕಿಂತ ಸ್ವಲ್ಪ ಮುಂದೆ ಹಸು ತನ್ನ ಕರುವಿನೊಂದಿಗೆ ಸಾಗುತ್ತಿತ್ತು. ಈ ವೇಳೆ ಹಸುವಿಗೆ ಏನಾಯಿತೋ ತಿಳಿಯದು ಒಮ್ಮೆಲೆ ತಿರುಗಿ ನಿಂತು ತನ್ನ ಹಿಂದೆ ಬರುತ್ತಿದ್ದ ಬಾಲಕಿ ಮೇಲೆರಗಿದೆ.
ಮೊದಲಿಗೆ ಬಾಲಕಿಯನ್ನು ತನ್ನ ಕೊಂಬಿನಿಂದ ಎತ್ತಿ ಎಸೆದ ಹಸು ನಂತರ ಕೆಳಗೆ ಬಿದ್ದ ಆಕೆಯನ್ನು ಒಂದೇ ಸಮನೆ ತುಳಿದಾಡಿದೆ. ಈ ವೇಳೆ ಅಲ್ಲಿನ ಸ್ಥಳೀಯರು ಹಸುವನ್ನು ದೂರ ಓಡಿಸುವ ಪ್ರಯತ್ನವಾಗಿ ಹಸುವಿನ ಮೇಲೆ ಕಲ್ಲು ದೊಣ್ಣೆಗಳನ್ನು ಎಸೆದರೂ ಹಸು ಮಾತ್ರ ನಿಮಿಷಗಳ ಕಾಲ ಬಾಲಕಿಯನ್ನು ತುಳಿದು ತುಳಿದು ಹಾಕಿದೆ. ಈ ವೇಳೆ ಓಡಿಸಲು ಬಂದವರ ಮೇಲೂ ಹಸು ದಾಳಿಗೆ ಮುಂದಾಗಿದೆ. ಕಡೆಗೂ ಅನೇಕರ ಪ್ರಯತ್ನದಿಂದ ಹಸುವನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಬಾಲಕಿ ಗಾಯಗೊಂಡಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸುಗಳ ಮಾಲೀಕನನ್ನು ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿದ್ದಾರೆ. ನಿರ್ಲಕ್ಷ್ಯ ಮತ್ತು ಸಾರ್ವಜನಿಕ ಜೀವಕ್ಕೆ ಅಪಾಯದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅರುಂಬಕ್ಕಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಚೆನ್ನೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹಸುಗಳ ಮಾಲೀಕರಿಗೆ 2,000 ದಂಡ ವಿಧಿಸಿದರು.










