ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್‍ವೈ ಹೆಸರಿಡಲು ಕೇಂದ್ರಕ್ಕೆ ಶಿಫಾರಸು : ಬೊಮ್ಮಾಯಿ

73
firstsuddi

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ನಿನ್ನೆ ನಗರದ ಎನ್‍ಇಎಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನಿಡಲು ಸಚಿವ ಸಂಪುಟ ನಿರ್ಧರಿಸಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶಿವಮೊಗ್ಗ ಬೆಂಗಳೂರಿನ ನಂತರ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಹಾಗೂ ಅಭಿವೃದ್ಧಿಯಾಗುತ್ತಿರುವ ಭವಿಷ್ಯದ ನಗರ ಎಂದು ತಿಳಿಸಿದರು.

2006ರ ಹಿಂದಿನ ಶಿವಮೊಗ್ಗ ಹಾಗೂ ಇಂದಿನ ಶಿವಮೊಗ್ಗದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ನಾವು ಕಾಣುತ್ತಿದ್ದೇವೆ. ವಸತಿ ಯೋಜನೆಗಳಡಿ ಮನೆಗಳನ್ನು ನೀಡುವುದು, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ, ಶಿಕ್ಷಣ, ರಸ್ತೆ, ನೀರು, ನಗರಾಭಿವೃದ್ಧಿ ಹೀಗೆ ಹತ್ತು ಹಲವು ಪುಣ್ಯದ ಕೆಲಸಗಳು ಜನೋಪಯೋಗಿ ನಾಯಕರಿಂದ ಸಾಧ್ಯವಾಗಿದೆ. ಕೇವಲ 18 ತಿಂಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ವಿಮಾನ ನಿಲ್ದಾಣದಿಂದಾಗಿ ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ವಲಯದಲ್ಲಿ ಜಿಲ್ಲೆಯು ಅಭಿವೃದ್ಧಿ ಹೊಂದಲಿದೆ ಎಂದರು.

ಶಾಸಕರಾದ ಕೆ.ಎಸ್. ಈಶ್ವರಪ್ಪ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಕೆ.ಬಿ.ಅಶೋಕ ನಾಯ್ಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.