ಶೀಘ್ರವೇ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ : ಸುಧಾಕರ್ ಭರವಸೆ…

53
firstsuddi

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ಟ್ಟಿಟರ್ ಅಭಿಯಾನ ಶುರು ಮಾಡಿದ್ದು, ಈ ಕುರಿತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ಅವರು, ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಆರೋಗ್ಯ ಮೂಲಸೌಕರ್ಯ ಅಗತ್ಯತೆಗಳ ಕುರಿತಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ, ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸುಧಾಕರ್ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ 2019ರಲ್ಲಿ ಕೂಡಾ ಟ್ಟಿಟ್ಟರ್ ಅಭಿಯಾನ ನಡೆದಿತ್ತು. ಅಂದಿನ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಆದ್ರೆ, ಯಾವುದೇ ಕಾರ್ಯಗಳು ಆಗಿರಲಿಲ್ಲ. ಈ ನಡುವೆ ಇತ್ತೀಚಿಗೆ ಶಿರೂರು ಟೋಲ್ ಗೇಟ್ ನಲ್ಲಿ ನಡೆದ ಭೀಕರ ಆಂಬುಲೆನ್ಸ್ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಬಳಿಕ ಮತ್ತೆ ಆಸ್ಪತ್ರೆಗಾಗಿ ಕೂಗು ಹೆಚ್ಚಾಗಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಮ್ಮ ಪಕ್ಷವೂ ಜೊತೆಗೆ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದ ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ, ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂತಹ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ ಎಂದು ಹೇಳಿದ್ದಾರೆ.