ಬೆಂಗಳೂರು : ರಸ್ತೆ ಅಪಘಾತದಲ್ಲಿ ಮೆದುಳಿಗೆ ಮತ್ತು ತೊಡೆಗೆ ತೀವ್ರ ಗಾಯವಾಗಿ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದುಬಂದಿದೆ.
ವೆಂಟಿಲೇಟರ್ ಮೇಲೆ ವಿಜಯ್ ಇದ್ದಾರೆ. ನಾವು ಏನೇ ಚಿಕಿತ್ಸೆ ಕೊಟ್ಟರೂ ಸ್ಪಂದಿಸುತ್ತಿಲ್ಲ. ಅವರ ಮೆದುಳು ನಿಷ್ಕ್ರಿಯವಾಗುತ್ತಿದೆ ಎಂದು ಅಪೋಲೋ ವೈದ್ಯರು ಮಾಹಿತಿ ನೀಡಿದ ಬಳಿಕ ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಚಿಕಿತ್ಸೆ ಕೊಟ್ರೂ ರಿಕವರಿ ಕಷ್ಟವಾಗಿದೆ, ಹೀಗಾಗಿ ಅಂಗಾಂಗ ದಾನ ಮಾಡೇಕು ಅಂತ ನಿರ್ಧಾರ ಮಾಡಲಾಗಿದೆ ಎಂದು ಹೇಳುತ್ತಾ ವಿಜಯ್ ಸಹೋದರ ಸಿದ್ದೇಶ್ ಕಣ್ಣೀರು ಹಾಕಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ, ನಟ ಮಾತ್ರವಲ್ಲದೇ ವಿಜಯ್ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ. ನೆರೆಪರಿಹಾರಕ್ಕಾಗಿಯೂ 24 ಗಂಟೆ ಶ್ರಮಿಸಿದ್ದಾನೆ. ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದ. ವಿಜಯ್ ಅಂಗಾಂಗಳನ್ನು ದಾನ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಈ ಮಾತನ್ನು ನಾನು ಹೇಳಬಾರದು. ಅವರ ಆತ್ಮಕ್ಕೆ ಸುಖ ಶಾಂತಿ ಸಿಗಲಿ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಸರ್ಕಾರದ ಮಟ್ಟದಲ್ಲಿ ಡಿಸಿಎಂ ಅಶ್ವಥ ನಾರಾಯಣ ಅವರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಧನ್ಯವಾದಗಳು.ಸಮಾಜಕ್ಕಾಗಿ ದುಡಿಯುತ್ತಿದ್ದ ಅವನ ದೇಹದ ಅಂಗಾಂಗಳನ್ನು ದಾನ ಮಾಡಿ ನಾಲ್ಕು ಜನಕ್ಕೆ ಉಪಯೋಗವಾಗಲಿ ಎಂಬುದೇ ನಮ್ಮ ಬಯಕೆಯಾಗಿದೆ. ಅವನಿಲ್ಲ ಅನ್ನೋದನ್ನ ಕಲ್ಪಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ ಎಂದು ಭಾವುಕರಾದರು.










