ಸಂವಿಧಾನದಿಂದಾಗಿ ಕೆಳವರ್ಗದವರು ಅನೇಕ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ : ಕೆ.ಬಿ.ಸುಧಾ

102
firstsuddi

ಚಿಕ್ಕಮಗಳೂರು: ಕೆಳವರ್ಗದ ಜನ ಆಸೆ ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡಿ ಮನುವಾದಿ ಮನಸ್ಥಿತಿಯ ಪಕ್ಷವನ್ನು ಅಧಿಕಾರಕ್ಕೆ ತಂದ ಪರಿಣಾಮ ದೇಶದ ಸಂವಿಧಾನವಿಂದು ಅಪಾಯದ ಅಂಚಿನಲ್ಲಿದೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಹೇಳಿದರು.

ಬಿಎಸ್‍ಪಿ ವಿಧಾನಸಭಾ ಕ್ಷೇತ್ರ ಸಮಿತಿ ನಗರದ ಪಕ್ಷದ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ 74ನೇ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಕೆಳವರ್ಗದವರು, ಹಿಂದುಳಿದವರು, ಅಲ್ಪಸಂಖ್ಯಾತರು ಮಹಿಳೆಯರು ಮತ್ತು ಮಕ್ಕಳು ಸಮಾನತೆ, ಶಿಕ್ಷಣ, ಉದ್ಯೋಗ, ಮತದಾನ ಸೇರಿದಂತೆ ಅನೇಕ ಹಕ್ಕುಗಳನ್ನು, ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದರು.

ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನವನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಲಾಗುತ್ತಿದೆ. ಶಿಕ್ಷಣ ಉದ್ಯೋಗ ಸೇರಿದಂತೆ ರಾಷ್ಟ್ರದ ಸಂಪನ್ಮೂಲಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಇದರ ಪರಿಣಾಮ ಮುಂದೊಂದು ದಿನ ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗಿ ಮತ್ತೆ ರಾಜ ಪ್ರಭುತ್ವ ಬರಲಿದೆ ಎಂದು ಎಚ್ಚರಿಸಿದರು.

ಕೆಳವರ್ಗದ ಜನ ಈಗಲಾದರೂ ಎಚ್ಚೆತ್ತು ಬದಲಾಗಬೇಕು. ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು. ಕಾರ್ಯಕರ್ತರು ಅವಿರತವಾಗಿ ಶ್ರಮಿಸುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹರೀಶ್ ಮಿತ್ರ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂವಿಧಾನ ಜಾರಿಯಾದ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಸಂವಿಧಾನವನ್ನು ಸಂರಕ್ಷಿಸುವ ಕುರಿತು ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಮುಖಂಡ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿದರು.

ವಿಧಾನಸಭಾಕ್ಷೇತ್ರ ಸಮಿತಿ ಸಂಯೋಜಕಿ ಕೆ.ಎಸ್.ಮಂಜುಳ, ಪಕ್ಷದ ಮುಖಂಡರಾದ ನವೀನ್, ವಿನೀತ್, ರವಿ, ಜಯಚಂದ್ರ, ಧನಂಜಯ, ಉಪನ್ಯಾಸಕ ಸುರೇಶ್, ಸಾಕಮ್ಮ, ಕಲಾವತಿ, ರತ್ನ, ವಸಂತ ಉಪಸ್ಥಿತರಿದ್ದರು.