ಬೆಂಗಳೂರು : ಆಹಾರ, ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಉಮೇಶ್ ಕತ್ತಿ ಅವರು ರಾತ್ರಿ ಊಟ ಮುಗಿಸಿ ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸಮೀಪದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ 11ರ ಸುಮಾರಿಗೆ ಮೃತಪಟ್ಟಿದ್ದಾರೆ.
ಉಮೇಶ್ ಕತ್ತಿ ಅವರಿಗೆ ಈ ಹಿಂದೆಯೂ ಎರಡು ಬಾರಿ ಹೃದಯಾಘಾತವಾಗಿತ್ತು. ಈ ವೇಳೆ ಎರಡು ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದರು. ಸಚಿವರ ಅಗಲಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.
ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಹುಟ್ಟೂರು ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ಇಂದು ಸಂಜೆ ನೆರವೇರಲಿದೆ. ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಸಂಜೆ ಕತ್ತಿ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.










