ಚಿಕ್ಕಮಗಳೂರು : ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಸಮುದಾಯಗಳು ಅಭಿವೃದ್ದಿ ಹೊಂದಿ ಮುಖ್ಯವಾಹಿನಿಗೆ ಬರಬೇಕಾದರೆ ಆ ವರ್ಗದ ಜನ ಒಗ್ಗೂಡಿ ಸಂಘಟಿತರಾಗಬೇಕು ಎಂದು ನಿವೃತ್ತ ನ್ಯಾಯಾಧೀಶ ಎಸ್.ನಾಗೇಶ್ ಸಲಹೆ ಮಾಡಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕೆಳಸ್ತರದಲ್ಲಿರುವ ಸಮುದಾಯಗಳು ಅಭಿವೃದ್ದಿ ಹೊಂದಿ ಮುಖ್ಯವಾಹಿನಿಗೆ ಬಾರದಿರಲು ಮುಖ್ಯ ಕಾರಣ ಆ ವರ್ಗಗಳ ಜನ ಶಿಕ್ಷಣವಂತರಾಗದಿರುವುದು ಮತ್ತು ಒಗ್ಗೂಡಿ ಸಂಘಟಿತರಾಗದಿರುವುದು ಎಂದರು.
ಮಡಿವಾಳ ಸಮುದಾಯದ ಜನ ಇದನ್ನು ಅರ್ಥಮಾಡಿಕೊಳ್ಳಬೇಕು, ತಮ್ಮ ಉಪಜಾತಿಗಳಲ್ಲಿರುವ ವೈರುಧ್ಯವನ್ನು ಬದಿಗೊತ್ತಿ ಎಲ್ಲರೂ ಒಂದಾಗಬೇಕು, ಕುಲ ಕಸುಬಿಗೇ ಅಂಟಿಕೊಳ್ಳದೇ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಡಿವಾಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕಟೀಲು ಸಂಜೀವ ಮಡಿವಾಳ ಮಾತನಾಡಿ ಸಮುದಾಯದ ಜನರನ್ನು ಸಂಘಟಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಒಕ್ಕೂಟದ ಘಟಕಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ವೇಣು ಮಾತನಾಡಿ ಸಮುದಾಯದ ಅಭಿವೃದ್ದಿಗೆ ಸಂಘದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ನ್ಯಾಯಾಧೀಶ ಎಸ್.ನಾಗೇಶ್, ನಿವೃತ್ತ ಶಿಕ್ಷಕ ವೈ.ಕೆ.ರಂಗಪ್ಪ, ಒಕ್ಕೂಟದ ರಾಜ್ಯಾಧ್ಯಕ್ಷ ಕಟೀಲು ಸಂಜೀವ ಮಡಿವಾಳ, ನಿವೃತ್ತ ಪ್ರಾಂಶುಪಾಲ ಶಿವಣ್ಣ, ಮಣೆಗಾರ ಮಾಳಯ್ಯ, ನಿವೃತ್ತ ಅರಣ್ಯಾಧಿಕಾರಿ ಪಂಚಾಕ್ಷರಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಕೆ.ಎನ್.ಬಸವರಾಜ್, ಭಾನುಮತಿ, ಉಪಾಧ್ಯಕ್ಷರಾದ ಕೆ.ರಾಮಶೆಟ್ಟಿ, ಕೆ.ಜಿ.ಭಾಗ್ಯ, ಪ್ರಧಾನ ಕಾರ್ಯದರ್ಶಿ ಟಿ.ಜೆ.ಷಣ್ಮುಕಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಟಿ.ಶಶಿರೇಖಾ, ಖಜಾಂಚಿ ಸೋಮಶೇಖರ್, ಯುವ ಘಟಕದ ಅಧ್ಯಕ್ಷೆ ಸಿ.ಡಿ.ಭವ್ಯ, ಕಾಂತರಾಜ್ ಉಪಸ್ಥಿತರಿದ್ದರು.










