ಧಾರವಾಡ : ನಗರದ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಂಪರ್ ಗಿಫ್ಟ್ ನೀಡಿದ್ದಾರೆ. 1177 ಶಾಲಾ-ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ವುವ ಬಣ್ಣದರ್ಪಣೆ ಕಾರ್ಯಕ್ರಮದ ಜೊತೆಗೆ, 320 ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಲೆಗೊಂದು ಸ್ಮಾರ್ಟ್ ಕ್ಲಾಸ್ ರೂಮ್, 50 ಸಾವಿರ ಡೆಸ್ಕ್, 100 ಹೈಟೆಕ್ ಅಂಗನವಾಡಿಗಳ ನಿರ್ಮಾಣದ ಗುರಿಯನ್ನ ಮುಂಬರುವ ಎರಡು ವರ್ಷದಲ್ಲಿ ಪೂರ್ಣಗೊಳಿಸಲು ನಿಶ್ಚಯಿಸಲಾಗಿದೆ. ಸಿ.ಎಸ್.ಆರ್ ಫಂಡ್ ಮೂಲಕ ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಪಂಚ ಯೋಜನೆಗಳನ್ನ ಜಾರಿಗೊಳಿಸಲಾಗುವುದು. ನಾಳೆಯಿಂದ ಆರಂಭವಾಗುವ ಬಣ್ಣದರ್ಪಣೆ ಕಾರ್ಯಕ್ರಮ ಮುಂದಿನ ವರ್ಷದ ದೀಪಾವಳಿ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ತಿಂಗಳು 100 ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯ ನಡೆಯಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1177 ಶಾಲಾ ಕಾಲೇಜುಗಳಿಗೆ ಹೊಸದಾಗಿ ಬಣ್ಣ ಹಚ್ಚಲು ನಿರ್ಧರಿಸಲಾಗಿದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಿಗೆ 480 ಹೊಸ ಕ್ಲಾಸ್ ರೂಮ್ ಗಳ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ವರದಿ ಪಡೆದಿರುವ ಪ್ರಹ್ಲಾದ್ ಜೋಶಿಯವರು, ಮುಂದಿನ ಎರಡು ವರ್ಷದ ಒಳಗೆ ಹೊಸ ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲು ತೀರ್ಮಾನಿಸಿದ್ದಾರೆ. 480 ಕ್ಲಾಸ್ ರೂಂಗಳ ಪೈಕಿ ರಾಜ್ಯ ಸರ್ಕಾರವೇ ತನ್ನ ಯೋಜನೆ ಅನ್ವಯ 160 ಕ್ಲಾಸ್ ರೂಮ್ ಗಳನ್ನ ಕಟ್ಟಿಸಿಕೊಡಲಿದೆ. ಉಳಿದ 320 ಹೊಸ ಕ್ಲಾಸ್ ರೂಮ್ ಗಳನ್ನ ಸಿ.ಎಸ್.ಆರ್ ಫಂಡ್ ನ ಸಹಾಯದೊಂದಿಗೆ ಕಟ್ಟಿಸಿಕೊಡುವುದಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಘೋಷಿಸಿದ್ದಾರೆ.