ತುಮಕೂರು: ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ.
ಪುತ್ರಿ ಜೊತೆ ದಂಪತಿ ಇಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಗಂಗಯ್ಯ (62), ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದವರು.
ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ, ಕಳೆದ ಎರಡು ವರ್ಷಗಳ ಹಿಂದೆ ಕೆಇಬಿ ಕೆಲಸದಿಂದ ನಿವೃತ್ತಿ ಹೊಂದಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಿದ್ದಗಂಗಯ್ಯ, ಬೆಂಗಳೂರಿನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡಿದ್ದರು. ಇಂದು ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಗುದ್ದಿದ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಸದ್ಯ ಮೃತ ದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










