ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಯಾವುದೇ ಆತಂಕ ಬೇಡ – ಸಿಎಂ

46
firstsuddi

ಬೆಂಗಳೂರು : ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ವೈಕುಂಠ ಏಕಾದಶಿ ಪ್ರಯುಕ್ತ ವೈಯ್ಯಾಲಿಕಾವಲ್ ನಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದ ಎಲ್ಲಾ ರೀತಿಯಲ್ಲೂ ಆರೋಗ್ಯ ಸಹಜ ಸ್ಥಿತಿಯಲ್ಲಿದೆ. ಇಂದು ಕೂಡ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಎಲ್ಲವೂ ಸಹಜವಾಗಿದೆ ಎಂದು ತಿಳಿದುಬಂದಿದೆ. ನಿನ್ನೆಯೇ ಅವರನ್ನು ಭೇಟಿ ಮಾಡಿದ್ದೆ, ಅವರು ನನ್ನನ್ನು ಗುರುತು ಹಿಡಿದರು. ಯಾವುದೇ ಆತಂಕ ಬೇಡ. ಸ್ವಾಮೀಜಿಗಳು ತಮ್ಮ ಅಂತರ್ ಗತ ಶಕ್ತಿಯಿಂದ ಆರೋಗ್ಯ ಸುಧಾರಿಸಿ ಬರಲಿದ್ದಾರೆ ಎಂದು ತಿಳಿಸಿದರು.

ಇಂದು ವೈಕುಂಠ ಏಕಾದಶಿ. ಈ ದಿನ ಹಿಂದೂಗಳಿಗೆ ಬಹಳ ಪವಿತ್ರ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕು ಎನ್ನುವ ಪ್ರತೀತಿ ಇದೆ. ಹಾಗಾಗಿ ತಿರುಪತಿಗೆ ಕೋಟಿಗಟ್ಟಲೆ ಜನ ಬಂದು ದರ್ಶನ ಮಾಡುತ್ತಿದ್ದಾರೆ. ನಾನು ಅಲ್ಲಿಗೆ ಹೋಗಿ ದರ್ಶನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ದರ್ಶನ ಮಾಡುತ್ತಿದ್ದೇನೆ. ದೇವರ ದರ್ಶನ ಪಡೆದುಕೊಂಡ ಬಳಿಕ ನಾನು ಪುನೀತನಾದೆ. ರಾಜ್ಯದ ಸಮಸ್ತ ಜನತೆಗೆ ಒಳಿತಾಗಲೀ ಎಂದು ಬೇಡಿಕೆ ಇಟ್ಟಿರುವೆ. ಚುನಾವಣೆಯ ಬಗ್ಗೆ ನಾನು ದೇವರ ಹತ್ತಿರ ಈ ಥರ ಎಲ್ಲಾ ಬೇಡಿಕೊಳ್ಳುವುದಿಲ್ಲ. ದೇವರಿಗೆ ಗೊತ್ತಿದೆ, ಮತದಾರರೇ ದೇವರು. ನನಗೆ ವಿಶ್ವಾಸ ಇದೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುತ್ತೆ ಎಂದು ಹೇಳಿದರು.

ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಾರ ಇನ್ನೂ ನನಗೆ ಗೊತ್ತಿಲ್ಲ, ಮಾಹಿತಿ ಪಡೆಯುವೆ. ಕಾನೂನಾತ್ಮಕವಾಗಿ ಏನೆಲ್ಲಾ ನಡೆಯಬೇಕೋ ನಡೆಯಲಿದೆ ಎಂದರು.