ಬೆಳಗಾವಿ: ಜ.2ರಿಂದ 7ರವರೆಗೆ ಸಿರಿ ಧಾನ್ಯ, ಸಾವಯವ ಮೇಳದ ಅಂತಾರಾಷ್ಟ್ರೀಯ ಪೂರ್ವಭಾವಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಸುವರ್ಣಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿರಿ ಧಾನ್ಯ ಮತ್ತು ಸಾವಯವ ಮೇಳದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಸಿರಿ ಧಾನ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಕಳೆದ 20 ವರ್ಷಗಳಿಂದ ಸಾವಯವಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಸಿರಿಧಾನ್ಯ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. 1ನೇ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ಸಿರಿ ಧಾನ್ಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೋವಿಡ್ ಇದ್ದ ಕಾರಣ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ನಡೆಸಿಲ್ಲ. ಮಳೆ ಕಡಿಮೆ ಇರುವ ಪ್ರದೇಶದಲ್ಲಿ ಸಿರಿ ಧಾನ್ಯಗಳನ್ನು ಹೆಚ್ಚು ಬೆಳೆಯುತ್ತಾರೆ. ಸಿರಿ ಧಾನ್ಯದಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ, ಲವಣಾಂಶಗಳು ಹೆಚ್ಚಿದೆ. ನಾರಿನ ಅಂಶ ಹೆಚ್ಚಿರುವುದರಿಂದ ವೈದ್ಯರು ಆರೋಗ್ಯಕ್ಕೆ ಉತ್ತಮ ಅಂತಿದ್ದಾರೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮೇಳದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಚಿವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.










