ಅಮರಾವತಿ : ಕೊರೊನಾ ಅಬ್ಬರದ ನಡುವೆಯೂ ಆಂಧ್ರಪ್ರದೇಶ ಸರ್ಕಾರ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ನಡಸಲು ನಿರ್ಧಾರ ಮಾಡಿತ್ತು. ಆದರೆ ಇದೀಗ ಸುಪ್ರಿಂಕೋರ್ಟ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ನಿರ್ಧಾರವನ್ನು ಕೈ ಬಿಟ್ಟಿದೆ.
ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆಂಧ್ರಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನಿನ್ನೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಕೋವಿಡ್ ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಎಂದು ಆಂಧ್ರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಅಲ್ಲದೇ ಜುಲೈ 31 ರೊಳಗೆ ಸಿಬಿಎಸ್ಇ ಮತ್ತು ಐಸಿಎಸ್ಇ 12ನೇ ತರಗತಿ ಫಲಿತಾಂಶವನ್ನು ಘೋಷಿಸಬೇಕೆಂದು ರಾಜ್ಯ ಶಿಕ್ಷಣ ಮಂಡಳಿಗಳಿಗೆ ನಿರ್ದೇಶನ ನೀಡಿತ್ತು.
ಇದೀಗ ಎಚ್ಚೆತ್ತುಕೊಂಡಿರುವ ಆಂಧ್ರ ಸರ್ಕಾರ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಂಧ್ರ ಪ್ರದೇಶ ಶಿಕ್ಷಣ ಸಚಿವ ಎ. ಸುರೇಶ್ ಅವರು, ಸುಪ್ರೀಂ ಆದೇಶದಂತೆ ಜುಲೈ 31 ರೊಳಗೆ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆಗಳನ್ನು ರದ್ದು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.










