ಸುರತ್ಕಲ್ ಯುವಕನ ಹತ್ಯೆ ಪ್ರಕರಣ: ನಿಷೇಧಾಜ್ಞೆ ಜಾರಿ, ಶಾಲಾ-ಕಾಲೇಜುಗಳಿಗೆ ರಜೆ…

66
firstsuddi

ಮಂಗಳೂರು: ಸುರತ್ಕಲ್ ನಲ್ಲಿ ನಿನ್ನೆ ರಾತ್ರಿ ಯುವಕನ ಹತ್ಯೆ ನಡೆದ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುರತ್ಕಲ್, ಮುಲ್ಕಿ, ಬಜ್ಪೆ ಮತ್ತು ಪಣಂಬೂರು ಠಾಣೆ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜು.29ರಂದು (ಇಂದು) ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ಮದ್ಯ ಮಾರಾಟ ನಿಷೇಧಿಸಲು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸೂಚನೆ ನೀಡಿದ್ದಾರೆ.

ವಾಹನ ತಪಾಸಣೆಗಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದ್ದೇವೆ
ರಾತ್ರಿ 10 ಗಂಟೆಯ ನಂತರ ಎಲ್ಲ ವಾಹನಗಳು ಹಾಗೂ ಸಂಚರಿಸುವ ಪ್ರತಿಯೊಬ್ಬರ ಚಲನವಲನವನ್ನು ಪರಿಶೀಲಿಸುತ್ತೇವೆ. ಶಂಕಿತ ವ್ಯಕ್ತಿಗಳನ್ನು ಪರಿಶೀಲನೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗುವುದು. ಫಾಜಿಲ್ ಹತ್ಯೆಯಿಂದ ಜನರಲ್ಲಿ ಭಯ ಹುಟ್ಟಿಸಿದೆ. ಸದ್ಯಕ್ಕೆ ಫಾಜಿಲ್ ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ದೂರು ಸ್ವೀಕರಿಸಿದ್ದೇವೆ. ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ಮಂಗಳೂರಿನಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ. ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಜಿಲ್ ಕೊಲೆಯಾದ ಯುವಕ. ಇವರು ಸುರತ್ಕಲ್ ನಲ್ಲಿ ಜವಳಿ ಅಂಗಡಿಯ ಮುಂಭಾಗದಲ್ಲಿ ನಿಂತುಕೊಂಡಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪಾಜಿಲ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಫಾಜಿಲ್ ಮೃತಪಟ್ಟಿದ್ದಾರೆ.