ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೆರೆಯ ಕೋಡಿಯಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ರಕ್ಷಣೆ.

37

ತುಮಕೂರು: ಮಂದಾರಗಿರಿ ಬೆಟ್ಟದ ಹಿಂಭಾಗದ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುವಾಗ ಆಯಾತಪ್ಪಿ ಕೆರೆಗೆ ಬಿದ್ದು ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಹಂಸ ಎಂಬ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ.
ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್ ಅವರ ಪುತ್ರಿ ಹಂಸ ಅವರು ನಗರದ ಎಸ್‍ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಕಾಲು ಜಾರಿ ಕೆರೆಗೆ ಬಿದ್ದು ಕೋಡಿಯಲ್ಲಿ ಕೊಚ್ಚಿಹೊದ ವಿದ್ಯಾರ್ಥಿನಿ ಕೆಳಕ್ಕೆ ಬಿದ್ದು ಪೊಟರೆಯೊಂದರಲ್ಲಿ ಸಿಲುಕಿಕೊಂಡಿದ್ದಳು. ಇಂದು ಆಕೆಯನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕೋಡಿ ಹರಿಯುವ ಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿರುವ ಕಲ್ಲಿನ ಬಂಡೆ ನಡುವೆ ಹಂಸ ಸಿಲುಕಿರಬಹುದು ಎಂದು ಶಂಕಿಸಿ. ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು. ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಭಾನುವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಇಂದು ಘಟನೆ ನಡೆದ ಮಂದಾರಗಿರಿ ಬೆಟ್ಟದ ಬಳಿ ಮೈದಾಳ ಕೆರೆ ಕೋಡಿ ಸ್ಥಳಕ್ಕೆ ಮತ್ತೆ ತೆರಳಿದ್ದು, ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು.