ಮೂಡಿಗೆರೆ :ಸೇತುವೆ ಕೊಚ್ಚಿ ಹೋಗಿ ಒಂದು ವರ್ಷ…ಇಲಾಖೆಗಳ ಹಗ್ಗಜಗ್ಗಾಟದಲ್ಲಿ ನೆನೆಗುದಿಗೆ ಬಿದ್ದ ಸೇತುವೆ ಕಾಮಗಾರಿ…ಬಂಕೇನಹಳ್ಳಿ ಗ್ರಾಮಸ್ಥರ ಆಕ್ರೋಶ.

303

ಬಣಕಲ್:ವಿವಿಧ ಇಲಾಖೆಗಳ ಹಗ್ಗಜಗ್ಗಾಟದ ಕಾರಣದಿಂದಾಗಿ ಬಂಕೇನಹಳ್ಳಿಯ ನೂತನ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ಕಳೆದ ವರ್ಷದ ಆಗಸ್ಟ್ ತಿಂಗಳ 9 ರಂದು ಸುರಿದ ಬಾರಿ ಮಳೆಗೆ ಹೇಮಾವತಿ ನದಿ ಮೈದುಂಬಿ ಹರಿದು  ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿತ್ತು. ಸ್ಥಳಕ್ಕೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸಿ ಸೇತುವೆ ನಿರ್ಮಿಸುವ ಭರವಸೆ ನೀಡಿದರು.ತಾತ್ಕಾಲಿಕವಾಗಿ ಮೋರಿಗಳನ್ನು ಹಾಕಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ತಾತ್ಕಾಲಿಕ ಸೇತುವೆಯೂ ಕಳೆದ ತಿಂಗಳು ಕೊಚ್ಚಿ ಹೋಗಿದ್ದು ಬಂಕೇನಹಳ್ಳಿ ಗ್ರಾಮಸ್ಥರಿಗೆ ಸಂಪರ್ಕವೆ ಇಲ್ಲದಂತಾಗಿದೆ.
2020 ರ ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದರು.
ಈ ಬಗ್ಗೆ ಜಿ.ಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಬಂಕೇನಹಳ್ಳಿ ಸೇತುವೆ ಲೋಕೋಪಯೋಗಿ ಇಲಾಖೆಯ 3.5 ಕೋಟಿ ಟೆಂಡರ್ ಕರೆಯಲಾಗಿತ್ತು. ಟೆಂಡರ್‍ನಲ್ಲಿ ಯಾರು ಭಾಗವಹಿಸದೇ ಇರುವುದರಿಂದ ಟೆಂಡರ್ ಕಾರ್ಯ ಪೂರ್ಣಗೊಂಡಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಿರಿಯ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಅವರು  ಫಸ್ಟ್ ಸುದ್ದಿಗೆ  ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರಕ್ಕೆ ಸೇತುವೆ ನಿರ್ಮಾಣದ ಯೋಜನಾ ವರದಿ ಕಳಿಸಿಕೊಡಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮೋಧನೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.


ಸೇತುವೆ ಕಾಮಗಾರಿಯೂ ಇಲಾಖೆಗಳ ಸಮನ್ವಯ ಹಾಗೂ ಜನ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ನೆನಗುದಿಗೆ ಬಿದ್ದಿದೆ. ಸೇತುವೆ ನಿರ್ಮಾಣವಾಗದೇ ಇರುವುದರಿಂದ ಬಂಕೇನಹಳ್ಳಿ ಸುತ್ತಮುತ್ತಲ್ಲಾ ಗ್ರಾಮಸ್ಥರು ಪರದಾಡುವಂತಾಗಿದೆ.
ವರ್ಷ ಕಳೆದರೂ ಸೇತುವೆ ನಿರ್ಮಾಣವಾಗದೇ ಇರುವುದು ಬಂಕೇನಹಳ್ಳಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ  ಜನಪ್ರತಿನಿಧಿಗಳನ್ನು ಟ್ರೋಲ್ ಮಾಡಿರುವ ಪೋಟೋ ವೈರಲ್ ಆಗಿದೆ. ಆಗಸ್ಟ್ 9 ಕ್ಕೆ ಸೇತುವೆ ಕೊಚ್ಚಿ ಹೋಗಿ ಒಂದು ವರ್ಷವಾಗುವುದರಿಂದ ಜನಪ್ರತಿನಿಧಿಗಳನ್ನು ಕರೆಸಿ ವರ್ಷಾಚರಣೆ ಮಾಡುವ ಬ್ಯಾನರ್‍ಗಳನ್ನು ಅಲ್ಲಲ್ಲಿ ಹಾಕುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ದರಿಸಿದ್ದಾರೆ.

ಪ್ರದಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಟೆಂಡರ್ ಆಗಿರುವುದರಿಂದ ಲೋಕೋಪಯೋಗಿ ಇಲಾಖೆಯಿಂದ ನೀಡುವ ಅನುದಾನವನ್ನು ತಡೆ ಹಿಡಿಯಲಾಗಿದೆ’                       –ಮಂಜುನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್. ಲೋಕೋಪಯೋಗಿ ಇಲಾಖೆ.

ಸೇತುವೆಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಸದ್ಯಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು’
                                                                         -ಎಂ.ಪಿ.ಕುಮಾರಸ್ವಾಮಿ ಶಾಸಕರು ಮೂಡಿಗೆರೆ.