ಚಿಕ್ಕಮಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಸಲಹೆ ಮಾಡಿದರು.
ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಗುರುವಾರ ನಡೆದ ರಾಜ್ಯ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಗಳು ತಮ್ಮ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಿದರೆ ಅವು ಜನಪ್ರಿಯತೆ ಪಡೆದುಕೊಳ್ಳುವುದರ ಜೊತೆಗೆ ಪರಿಣಾಮಕಾರಿಯಾಗಿ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಗಳು ಯೋಜನೆಗಳನ್ನು ಕಾರ್ಯಗೊಳಿಸುವ ವೇಳೆ ಸ್ಥಳೀಯರನ್ನು ಬಳಸಿಕೊಳ್ಳಬೇಕು ಇದರಿಂದಾಗಿ ಅವರಿಗೂ ಉದ್ಯೋಗ ದೊರಕಿದಂತಾಗುತ್ತದೆ ಎಂದ ಅವರು ಕಂಪನಿ ಅಧಿನಿಯಮದ ಪ್ರಕಾರ ನೋಂದಣಿಯಾಗಿರುವ ಸ್ವಯಂ ಸೇವಾ ಸಂಸ್ಥೆಗಳು ಸಾಂಸ್ಥಿಕ, ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಬೇಕು ಯಾವುದೇ ಕಾರಣಕ್ಕೂ ಸ್ವಂತಕ್ಕೆ ಬಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಮಾತನಾಡಿ ಸ್ವಯಂ ಸೇವಾಸಂಸ್ಥೆಗಳು ಜನರಿಗಾಗಿ ನಿಸ್ವಾರ್ಥತೆಯಿಂದ ದುಡಿಯಬೇಕು ಎಂದು ಸಲಹೆ ಮಾಡಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ ನಾಡಿನ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ದಾಖಲಾತಿಗಳನ್ನು ಉನ್ನತೀಕರಣಗೊಳಿಸಲು ಒಕ್ಕೂಟ ಮುಂದಾಗಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಆರು ವಿಷನ್ ಬಿಲ್ಡಿಂಗ್ ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
ಒಕ್ಕೂಟದ ಉಪಾಧ್ಯಕ್ಷ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು, ಆಡಳಿತ ಮಂಡಳಿ ಸದಸ್ಯ ಎಸ್.ಬಿ.ರಾಮಚಂದ್ರಪ್ಪ, ಜೆ.ವಿನಾಯಕ, ಉಪಾಧ್ಯಕ್ಷರಾದ ಬಿ.ಟಿ.ಬದ್ರೀಶ್, ಡಾ|| ನಾಗರಾಜ್, ಡಾ|| ವರ್ಷ, ಖಜಾಂಚಿ ಕೆ.ಎನ್.ಅನಿತಾ, ನಿರ್ದೇಶಕರಾದ ಚಕ್ರಪಾಣಿ ಕೆ.ಎನ್.ನೇತ್ರಾವತಿ, ಉಪಸ್ಥಿತರಿದ್ದರು.ವಿವಿಧ ಜಿಲ್ಲೆಗಳ 70 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.










