ಹಕ್ಕನ್ನು ಚಲಾಯಿಸಿದ ದೇಶದ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ : ನರೇಂದ್ರ ಮೋದಿ…

170
firstsuddi

ನವದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಟಿಯನ್ನು ನಡೆಸಿದ್ದು, ಅಮಿತ್ ಶಾ ಅವರು ಮಾತನಾಡಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪಷ್ಟ ಬಹುಮತ ದೊರಕಿತ್ತು. ಈ ಬಾರಿಯೂ ನಾವು ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಒಂದೂವರೆ ವರ್ಷದಲ್ಲಿ 80ಜನ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ದೇಶದ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಪ್ರಚಾರ ಮಾಡಿದ್ದು, ಯಾವಾ ಕ್ಷೇತ್ರದಲ್ಲೂ ನಡೆಯದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಮಾತ್ರ ನಡೆಯುತ್ತದೆ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿವಾಧಾತ್ಮಕ ಹೇಳಿಕೆಯನ್ನು ಕುರಿತು ಪ್ರತಿಕ್ರಯಿಸಿದ ಅಮಿತ್ ಶಾ ಅವರು ನಳಿನ್ ಕುಮಾರ್ ಕಟೀಲು, ಪ್ರಗ್ಯಾ ಸಿಂಗ್, ಅನಂತ್ ಕುಮಾರ್ ಹೆಗ್ಗಡೆ ಅವರಿಗೆ ನೋಟೀಸ್ ನೀಡಿದ್ದೇವೆ. ಅವರಿಂದ ಉತ್ತರ ಬಂದ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಲವು ವಿಚಾರಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. 2014ರ ಚುನಾವಣೆಯ ವೇಳೆ ಐಪಿಎಲ್ ರದ್ದಾಗಿತ್ತು. ಆದರೆ ಈ ಬಾರಿ ಚುನಾವಣೆ, ರಂಜಾನ್, ಪರೀಕ್ಷೆಗಳು ಹಾಗೂ ಐಪಿಎಲ್ ಹೀಗೆ ಎಲ್ಲವೂ ಒಟ್ಟಾಗಿ ಯಾವುದೇ ತೊಂದರೆ ಇಲ್ಲದೇ ನಡೆದಿದ್ದು, ಇದು ನಮ್ಮ ದೇಶದ ತಾಕತ್ತು ಎಂದು ಹೇಳಿದ್ದಾರೆ. ಈ ಬಾರಿಯ ಚುನಾವಣಾ ಪ್ರಚಾರ ಯಶಸ್ವಿಯಾಗಿದ್ದು, ನನಗೆ ಪ್ರಚಾರದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷ ತಂದಿದೆ. ಹಕ್ಕನ್ನು ಚಲಾಯಿಸಿದ ದೇಶದ ಜನತೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು. ನಾನು 5ವರ್ಷ ಉತ್ತಮವಾದ ಅಧಿಕಾರವನ್ನು ಕೊಟ್ಟಿದ್ದೇನೆ. ಇನ್ನೂ 5ವರ್ಷ ಜನರು ನನಗೆ ಅಧಿಕಾರವನ್ನು ನೀಡುತ್ತಾರೆ ಎಂದು ನಂಬಿದ್ದೇನೆ. ಫಲಿತಾಂಶ ಪ್ರಕಟವಾದ ಬಳಿಕ ಆದಷ್ಟು ಬೇಗ ಹೊಸ ಸರ್ಕಾರವನ್ನು ರಚನೆ ಮಾಡುತ್ತೇವೆ ಎಂದು ಹೇಳಿದರು.