ಹಣದುಬ್ಬರ ನಿಯಂತ್ರಿಸುವ ಉದ್ದೇಶ : ರೆಪೊ ದರ ಶೇ.4.40ಕ್ಕೆ ಹೆಚ್ಚಳ…

54
firstsuddi

ನವದೆಹಲಿ : ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರೆಪೊ ದರವನ್ನು ಶೇ.4.40 ಕ್ಕೆ ಹೆಚ್ಚಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಘೋಷಿಸಿದೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರಗಳನ್ನು 40 ಮೂಲಾಂಶಗಳಷ್ಟು ಹೆಚ್ಚಿಸಲು ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ಮತ ಹಾಕಿದೆ. ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ಶೇ 4.40ಕ್ಕೆ ನಿಗದಿಪಡಿಸಲಾಗಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ನಡುವೆಯೂ ಭಾರತೀಯ ಆರ್ಥಿಕತೆ ಸ್ಥಿರವಾಗಿದೆ ಎಂದು ಹೇಳಿದರು.

ಅಂತೆಯೇ ನಗದು ಮೀಸಲು ಅನುಪಾತವನ್ನು (ಕ್ಯಾಶ್ ರಿಸರ್ವ್ ರೇಷಿಯೊ) ಬೇಡಿಕೆಯ ಅನುಗುಣವಾಗಿ 50 ಮೂಲಾಂಶ ಹೆಚ್ಚಿಸಲಾಗಿದ್ದು, ಶೇ 4.5ಕ್ಕೆ ನಿಗದಿಪಡಿಸಲಾಗಿದೆ. ಇದು 2022ರ ಮೇ 21ರಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.