ಹರ್ ಘರ್ ತಿರಂಗಾ ಅಭಿಯಾನ : ನಿವಾಸದ ಮುಂದೆ ಸಿಎಂ ಧ್ವಜಾರೋಹಣ…

66
firstsuddi

ಬೆಂಗಳೂರು : ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಆರ್.ಟಿ.ನಗರದ ತಮ್ಮ ನಿವಾಸದ ಎದುರು ರಾಷ್ಟ್ರಧ್ವಜ ಹಾರಿಸಿದರು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಚನ್ನಮ್ಮ, ಪುತ್ರ ಭರತ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಕರೆಯ ಮೇರೆಗೆ ಹರ್ ಘರ್ ತಿರಂಗಾ ಕಾರ್ಯಕ್ರಮ ಪ್ರಾರಂಭವಾಗಿದೆ. ರಾಜ್ಯದ ಪ್ರತಿಯೊಂದು ಊರಲ್ಲಿ ಹರ್ ಘರ್ ತಿರಂಗಾ ಹಾಗೂ 75 ನೇ ಸ್ವಾತಂತ್ರ್ಯೋತ್ಸವ ಈಗಾಗಲೇ ಪ್ರಾರಂಭವಾಗಿದೆ. ರಾಜ್ಯದ ತುಂಬಾ ಹಬ್ಬದ ವಾತಾವರಣ ಹಾಗೂ ಉತ್ಸಾಹದ ವಾತಾವರಣ ಇದೆ. ರಾಜ್ಯದ ಸರ್ಕಾರ 1 ಕೋಟಿ 8 ಲಕ್ಷದಷ್ಟು ರಾಷ್ಟ್ರ ಧ್ವಜವನ್ನು ವಿತರಿಸಿದೆ. ಪ್ರತಿಯೊಂದು ಗ್ರಾಮ ಪಂಚಾಯತಿಗೆ 400 ರಿಂದ 500 ಧ್ವಜ ವಿತರಣೆ ಮಾಡಲಾಗಿದೆ. ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೂಲಕ ನಾವೆಲ್ಲ ಒಂದು ಎಂಬ ಸಂದೇಶ ರವಾನೆ ಮಾಡಬೇಕಿದೆ ಎಂದು ಹೇಳಿದರು.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದ ಮುಂದೆ ರಾಷ್ಟ್ರಧ್ವಜ ಹಾರಿಸಿದರೆ, ಸಚಿವ ಆರ್.ಅಶೋಕ್ ಜಾಲಹಳ್ಳಿಯ ಸ್ವಗೃಹದಲ್ಲಿ ಧ್ವಜಾರೋಹಣ ಮಾಡಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ್, ಎಸ್.ಟಿ.ಸೋಮಶೇಖರ್, ಸೇರಿದಂತೆ ಸಚಿವರುಗಳು ತಮ್ಮ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿದರು.