ಹಾಡಹಗಲೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪತಿ!

71
firstsuddi

ಬೆಳಗಾವಿ : ಹಾಡಹಗಲೇ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಜಿಲ್ಲೆಯ ಕೋಟೆ ಕೆರೆ ಬಳಿ ನಡೆದಿದೆ.

ಮಧ್ಯಾಹ್ನ ಎರಡು ಗಂಟೆಗೆ ಈ ಘಟನೆ ನಡೆದಿದ್ದು, ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್ (27) ಎಂಬುವರು ಕೊಲೆಯಾದ ದುರ್ದೈವಿ. ಹೀನಾಕೌಸರ್ ಕಳೆದ ನಾಲ್ಕು ವರ್ಷಗಳ ಹಿಂದೆ ಮಂಜೂರ್ ಇಲಾಹಿ ನದಾಫ್ (34) ಜೊತೆ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ಆದರೆ ಕೌಟುಂಬಿಕ ಕಲಹ ಹಿನ್ನಲೆ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್ ವಿಚ್ಛೇದನ ಕೋರಿ, ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂದು ಕೋರ್ಟ್ ಗೆ ಹಾಜರಾಗಿ ಗಾಂಧಿನಗರದಲ್ಲಿರುವ ತವರು ಮನೆಗೆ ಹೀನಾಕೌಸರ್ ವಾಪಸ್ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ  ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್ ನನ್ನು ಅಡ್ಡಗಟ್ಟಿದ ಮಂಜೂರು ವಿಚ್ಛೇದನ ನೀಡದಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಒಪ್ಪದಿದ್ದಕ್ಕೆ ಜನನಿಬಿಡ ಪ್ರದೇಶದಲ್ಲೇ ಹೆಂಡತಿಯನ್ನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಸೇರಿ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿ ಪತಿ ಮಂಜೂರ್ ಇಲಾಹಿಯನ್ನು ವಶಕ್ಕೆ ಪಡೆದಿದ್ದಾರೆ.