ಹಾಸನ: ಜಿಲ್ಲೆಯ ಉದಯಗಿರಿಯಲ್ಲಿರುವ ಖಾಸಗಿ ಕಾಲೇಜಿನ ಹಾಸ್ಟೆಲ್ನಲ್ಲಿ, ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊರ್ವನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಲಾಗಿದ್ದು, ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವಿಕಾಸ್ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಬೆಳಗುಲಿ ಗ್ರಾಮದ ಸುರೇಶ್ ಹಾಗೂ ಮಮತಾ ದಂಪತಿಯ ಏಕೈಕ ಪುತ್ರ ವಿಕಾಸ್(18) ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ಇಂದು ಕಾಲೇಜಿಗೆ ತೆರಳಿ ನಂತರ ಒಬ್ಬನೇ ಹಾಸ್ಟೆಲ್‌ಗೆ ಬಂದಿದ್ದ. ಬಳಿಕ ಸ್ನೇಹಿತರು ಹಾಸ್ಟೆಲ್‌ಗೆ ಬಂದು ನೋಡಿದಾಗ ವಿಕಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ವಿಚಾರ ತಿಳಿಯುತ್ತಿದ್ದಂತೆಯೇ ತಕ್ಷಣ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸಾವಿಗೆ ಹಾಸ್ಟೆಲ್ ವಾರ್ಡನ್ ಕಾರಣ ಎಂದು ಆರೋಪಿಸಿ ದಾಂಧಲೆ ನಡೆಸಿದ್ದಾರೆ. ಪುತ್ರನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಹಾಸ್ಟೆಲ್ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕುಟುಂಬ ಸದಸ್ಯರು ಕಿಡಿಕಾರಿದ್ದಾರೆ. ಆಡಳಿತ ಮಂಡಳಿ ಪ್ರಮುಖರು ಬರೋ ವರೆಗೆ ಮೃತದೇಹ ತೆಗೆಯಲು ಬಿಡಲ್ಲ ಎಂದು ಪುತ್ರನ ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೊಲೀಸರ ಜೊತೆಗೂ ಸಂಬಂಧಿಕರು ವಾಗ್ವಾದ ನಡೆಸಿದ್ದು, ಹಾಸ್ಟೆಲ್ನ ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು ಮೂರು ಗಂಟೆಯಾದರೂ ಇನ್ನೂ ಬಂದಿಲ್ಲ. ಕೂಡಲೇ ಆಡಳಿತ ಮಂಡಳಿಯವರು ಬರಬೇಕು ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.










