ಚಿಕ್ಕಮಗಳೂರು: ಜಾನಪದ ಸಂಸ್ಕೃತಿ ಸದೃಢವಾದ ಜೀವನ ಶೈಲಿಯನ್ನು ಒಳಗೊಂಡಿದೆ. ಹಿಂದಿನ ತಲೆಮಾರಿನವರ ಆರೋಗ್ಯಕರ ಜೀವನಕ್ಕೆ ಜಾನಪದ ಸೊಗಡಿನ ಆಹಾರ ಪದ್ಧತಿಯೇ ಕಾರಣ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಹೇಳಿದರು.
ಕಳಸದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಕರ್ನಾಟಕ ಜಾನದಪ ಪರಿಷತ್ತಿನ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಮತ್ತು ಡಾ.ಎಚ್.ಎಲ್.ನಾಗೇಗೌಡ ಅವರ ಬದುಕು ಬರಹ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಾನಪದ ಆಹಾರ ಪದ್ಧತಿಯನ್ನು ನಾವು ಕೈ ಬಿಟ್ಟು ಪಾಶಾತ್ಯ ಅಡುಗೆಗಳಿಗೆ ಮಾರುಹೋದ ಕಾರಣ ಇನ್ನಿಲ್ಲದ ರೋಗ ರುಜಿನಗಳು ನಮ್ಮನ್ನು ಕಾಡುತ್ತಿವೆ. ಆದರೆ, ನಮ್ಮ ಹಿಂದಿನ ತಲೆಮಾರಿನವರು ಜಾನಪದ ಪದ್ಧತಿಯ ಆಹಾರವನ್ನು ಬಳಸುತ್ತಿದ್ದ ಕಾರಣ ಯಾವುದೇ ರೋಗಗಳಿಲ್ಲದೆ ಬಹುತೇಕ ಶತಾಯುಷಿಗಳಾಗಿ ಬಾಳುತ್ತಿದ್ದರು ಎಂದರು.
ಪರಿಸರ ಸಂರಕ್ಷಣೆ ಸೇರಿದಂತೆ ಎಲ್ಲವೂ ಜನಪದದಲ್ಲಿ ಅಡಕವಾಗಿವೆ. ನಾವುಗಳು ಅದನ್ನು ಮೈಗೂಡಿಸಿಕೊಂಡಲ್ಲಿ ಸ್ವಾಸ್ತ್ಯ ಸಮಾಜದ ನಿರ್ಮಾಣವಾಗುವುದರ ಜೊತೆಗೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯೂ ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆ.ರಾ.ಸತೀಶ್ಚಂದ್ರ, ಜಾಗತೀಕರಣದ ಪ್ರಭಾವ ಹಾಗೂ ಕಲೆಗಳಿಗೆ ಪ್ರೋತ್ಸಾಹದ ಕೊರತೆಯಿಂದಾಗಿ ಜಾನಪದವಿಂದು ಕಣ್ಮರೆಯಾಗುತ್ತಿವೆ ಎಂದು ವಿಷಾಧಿಸಿದರು.
ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗ್ಗಡೆ ಮಾತನಾಡಿ, ನಾವು ಜಾನಪದವನ್ನು ಮರೆತರೆ ನಮ್ಮ ಸಂಸ್ಕೃತಿಯನ್ನು ಮರೆತಂತೆ ಹಾಗಾಗಿ ಎಲ್ಲರೂ ಜಾನಪದದತ್ತ ಮತ್ತೆ ಹೊರಳಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ನಾಟಿ ವೈದ್ಯಸಾಲಿನಮಕ್ಕಿ ಕೃಷ್ಣಮೂರ್ತಿ ಜೋಯಿಸ್ ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳಸ ತಾಲೂಕು ಜಾನಪದ ಪರಿಷತ್ತಿನ ನೂತನ ಅಧ್ಯಕ್ಷ ರಜಿತ್ ಕೆಳಗೂರು, ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್, ಕಾಲೇಜಿನ ಪ್ರಾಂಶುಪಾಲ ವಿನಯ್‍ಕುಮಾರ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ರಾಜೇಂದ್ರ ಹೆಬ್ಬಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ, ಕಸಾಪ ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.










