ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆ ವೇಳೆ ಕ್ರೇನ್ ಹರಿದು ಯುವಕ ಸಾವು…

63
firstsuddi

ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ಧತೆ ಕಾರ್ಯದಲ್ಲಿ ತೊಡಗಿದ್ದಾಗ ಕ್ರೇನ್ ಹರಿದು ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಪಿಬಿ ರಸ್ತೆಯ ರೇಣುಕಾಮಂದಿರದ ಬಳಿ ನಡೆದಿದೆ.

ಬಸವರಾಜಪೇಟೆ ನಿವಾಸಿ ಪೃಥ್ವಿರಾಜ್(26) ಮೃತ ದುರ್ದೈವಿ. ನಗರದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಅಕ್ಟೋಬರ್ 14ರಂದು ನಡೆಯಲಿದೆ. ಈ ಸಂಬಂಧ ಪಿಬಿ ರಸ್ತೆಯಲ್ಲಿ ಕೇಸರಿ ಧ್ವಜಗಳನ್ನು ಕಟ್ಟಿ ಅಲಂಕಾರ ಮಾಡಲಾಗುತ್ತಿತ್ತು. ಈ ವೇಳೆ ಕ್ರೇನ್ ಚಾಲಕ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದಾನೆ. ಈ ಸಂದರ್ಭ ಅಲ್ಲಿಯೇ ನಿಂತಿದ್ದ ಪೃಥ್ವಿರಾಜ್ ತಲೆ ಮೇಲೆ ಕ್ರೇನ್ ಹರಿದಿದ್ದು, ಗಂಭೀರ ಗಾಯಗೊಂಡ ಪೃಥ್ವಿರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಯ ಮುಂಭಾಗ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.