ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ ಶಿಕ್ಷೆ…

182
firstsuddi

ನವದೆಹಲಿ: ಭಾರತದ ಹಿರಿಯ ಅಥ್ಲೀಟ್, ಏಷ್ಯನ್ ಗೇಮ್ಸ್ ಪದಕ ವಿಜೇತೆ ಎಂಆರ್ ಪೂವಮ್ಮ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದು, 2 ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಫೆಬ್ರವರಿ 18 ರಂದು ಪಾಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ವೇಳೆ 32 ವರ್ಷದ ಪೂವಮ್ಮ ಅವರ ಸ್ಯಾಂಪಲ್ ಪಡೆಯಲಾಗಿತ್ತು. ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ರದ್ದು ಮಾಡಿದ್ದ ಉತ್ತೇಜಕ ಮೀಥೈಲ್ಹೆಕ್ಸಾನಿಯಮೈನ್ ತೆಗೆದುಕೊಂಡಿರುವುದು ವರದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಅವರ ಮೇಲೆ ಮೂರು ತಿಂಗಳು ನಿಷೇಧ ಶಿಕ್ಷೆ ಹೇರಲಾಗಿತ್ತು.

ಆದರೆ ಈ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಎಡಿಎಪಿ ಸಮಿತಿಯು ಪೂವಮ್ಮ ಅವರ ನಿಷೇಧ ಶಿಕ್ಷೆಯನ್ನು ಇದೀಗ ಎರಡು ವರ್ಷಗಳಿಗೆ ವಿಸ್ತರಿಸಿದೆ.