ಹುತಾತ್ಮ ವೀರ ಯೋಧರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಕೆ.

30

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನವು ಹೊಂಡಕ್ಕೆ ಉರುಳಿ ಬಿದ್ದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಹುತಾತ್ಮರಾದ ಇಬ್ಬರು ಯೋಧರಿಗೆ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಅಂತಿಮ ನಮನ ಸಲ್ಲಿಸಿದರು. ಬೆಳಗಾವಿಯ ಸೇನಾ ಯುದ್ಧ ಸ್ಮಾರಕದಲ್ಲಿ ಸುಬೇದಾರ್ ದಯಾನಂದ ತಿರುಕಣ್ಣನವರ್, ಮಹೇಶ್ ಮಾರಿಗೊಂಡ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿಗಳು ಪುಷ್ಪ ನಮನ ಸಲ್ಲಿಸಿ, ಅಂತಿಮ ಗೌರವವನ್ನು ಸಲ್ಲಿಸಲಾಯಿತು. ಬಳಿಕ ಸುದ್ದಿಗೋಷ್ಠಿಯವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ನಾಲ್ಕು ಜನ ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಹೇಳಿದರು. ಇದೇ ವೇಳ ಸರಕಾರದಿಂದ ನಿಯಮಾನುಸಾರ ಹುತಾತ್ಮರ ಕುಟುಂಬಕ್ಕೆ ಸಲ್ಲಬೇಕಾದ ಸಕಲ ನೆರವನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆವನ್ನು ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಸೇನಾಧಿಕಾರಿಗಳು ಮತ್ತು ಮಾಜಿ ಸೈನಿಕರ ಸಂಘಟನೆಯವರು ಹಾಜರಿದ್ದರು. ಇದೀಗ ಯೋಧರ ಪಾರ್ಥಿವ ಶರೀರಗಳನ್ನು ಸ್ವಗ್ರಾಮಗಳಿಗೆ ರವಾನಿಸಲಾಗುತ್ತಿದ್ದು, ಆನಂತರ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.