ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ, ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡ್ತಿದ್ದಾರೆ : ಅಶ್ವತ್ಥ್ ನಾರಾಯಣ.

74
firstsuddi

ಬೆಂಗಳೂರು: ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಏನೂ ಸಂಬಂಧ ಇಲ್ಲ. ಏನಾದರು ಇದ್ದರೆ ಹೋಗಿ ನೋಡಲಿ. ನನ್ನ ಸಹೋದರಿನಿಗೂ ಈ ಚಿಲುಮೆಗೂ ಸಂಬಂಧ ಇಲ್ಲ. ಕಾಂಗ್ರೆಸ್‍ನವರು ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ ಅವರು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸಂಸ್ಥೆಯೊಂದು ಮತದಾರರ ಮಾಹಿತಿ ಸಂಗ್ರಹ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಹೊಂಬಾಳೆ ಪ್ರತಿಷ್ಠಿತ ಸಂಸ್ಥೆ. ನಮ್ಮ ನಾಡಿಗೆ, ಸಿನಿಮಾಗೆ ಗೌರವ ತಂದಿರೋರು. ಇಂತಹ ಕೀಳು ಮಟ್ಟದಲ್ಲಿ ಮಾತಾಡ್ತಿರೋರ ರೇಂಜ್ ಗೆ ಹೊಂಬಾಳೆ ಸಂಸ್ಥೆ ಇಲ್ಲ. ಆರೋಪ ಮಾಡೋರು ನೋಡಿಕೊಂಡು ಮಾತಾಡಲಿ. ಸಂಸ್ಥೆ ಮೇಲೆ ಯಾಕೆ ಅವಮಾನ ಮಾಡ್ತೀರಾ ಎಂದು ಪ್ರಶ್ನಿಸಿದರು.

ಇಂತಹ ನಿರಾಧಾರವಾದ ಆಪಾದನೆ ಖಂಡಿಸುತ್ತೇನೆ. ಚುನಾವಣೆ ಆಯೋಗದ ಹಿನ್ನೆಲೆಯಲ್ಲಿ ಅದು ನಡೆದಿರುತ್ತೆ. ಪಕ್ಷ ಸರ್ಕಾರದ ಅಡಿ ಆಗಲ್ಲ. ಪುರುಸೊತ್ತಾಗಿ ಕಾಂಗ್ರೆಸ್ನವರು ಇದ್ದಾರೆ. ನಮ್ಮ ನಾಡಿಗೆ ಗೌರವ ತರುವ ಸಂಸ್ಥೆ ನಮ್ಮದು. ಕಾಂಗ್ರೆಸ್ ಅವರಂತೆ ನಾಡಿಗೆ ಅಗೌರವ ತರುವವರು ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಫೋಟೋ ರಿಲೀಸ್ ವಿಚಾರ ಕುರಿತು ಪ್ರತಿಕ್ರಿಯಿಸಿ, ಕೃಷ್ಣಪ್ಪ ಯಾರು ಅಂತ ಗೊತ್ತು. ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ. ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ? ಕಾರ್ಯಕ್ರಮಕ್ಕೆ ಕರೆದಿದ್ದರು. ಹೋಗಿದ್ದೆ. ಅದು ತಪ್ಪಾ..? ಕಾಂಗ್ರೆಸ್ ಅವರು ದೂರು ನೀಡಲಿ. ಚುನಾವಣೆ ಆಯೋಗ ತನಿಖೆ ಮಾಡುತ್ತೆ. ಚುನಾವಣೆ ಆಯೋಗ ತನಿಖೆ ಬಗ್ಗೆ ತೀರ್ಮಾನ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಆರೋಪವೇನು? : ಚಿಲುಮೆ ಎಂಟರ್ ಪ್ರೈಸಸ್, ಡಿಎಪಿ, ಹೊಂಬಾಳೆ ಪ್ರೈವೇಟ್ ಲಿ.ನಿಂದ ಮತದಾರರ ಮಾಹಿತಿ ಕಳ್ಳತನ ಮಾಡಲಾಗುತ್ತಿದೆ. ಮತದಾರರ ಮಾಹಿತಿ ಕದಿಯುವ ಕೆಲಸದಲ್ಲಿ ಸರ್ಕಾರ ತೊಡಗಿದೆ. ಮೊದಲು ಮಹದೇವಪುರದಲ್ಲಿ ಜಾಗೃತಿಗೆ ಅನುಮತಿ ಕೊಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಿಸುತ್ತಿರುವ ಕಂಪನಿ ಮಲ್ಲೇಶ್ವರಂನಲ್ಲಿದೆ. ಮತದಾರರ ಮಾಹಿತಿ ಎಲೆಕ್ಷನ್ ಕಮಿಷನ್ ಗೆ ಅಪ್ಲೋಡ್ ಆಗಿಲ್ಲ. ವೈಯಕ್ತಿಕ ಮಾಹಿತಿ ಖಾಸಗಿ ಆ್ಯಪ್ ಗೆ ಅಪ್ಲೋಡ್ ಆಗಿದ್ದೇಗೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಸ್ಥೆಗಳಿಗೂ ಸಿಎಂಗೂ, ಸಚಿವ ಅಶ್ವತ್ಥ್ ನಾರಾಯಣಗೆ ಸಂಬಂಧವೇನು…?, ಬಿಬಿಎಂಪಿ ಕೂಡ ಈ ದತ್ತಾಂಶ ಕಳ್ಳತನದಲ್ಲಿ ಭಾಗಿಯಾಗಿದ್ದು, ಗುತ್ತಿಗೆ ನೌಕರರಿಗೆ ಸರ್ಕಾರಿ ಐಡಿ ಕೊಟ್ಟಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದಿದೆ. ಅಲ್ಲದೆ ಸಿಎಂ ಬೊಮ್ಮಾಯಿ ಮತ್ತು ಸಚಿವ ಅಶ್ವತ್ಥ್ ನಾರಾಯಣ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹಿಸಿದೆ.