ಹೊಸಪೇಟೆ: ಹಿಂದಿನ ರಾಜಕಾರಣಿಗಳ ಭಾಷಣಗಳಲ್ಲಿ ವಸ್ತುನಿಷ್ಟವಾದ ಹಾಗೂ ಮೌಲ್ಯಯುತವಾದ ಅಂಶಗಳು ಒಳಗೊಂಡಿರುತ್ತಿದ್ದವು ಎಂದು ಹಂಪಿ ಕನ್ನಡ ವಿ.ವಿ.ಯ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಅವರು ಅಭಿಪ್ರಾಯಪಟ್ಟರು.
ಅವರು ಸೋಮವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ಹಮ್ಮಿಕೊಂಡಿದ್ದ
ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ರಾಜಕಾರಣದಲ್ಲಿ ಯಾವ ನೈತಿಕತೆ ಮತ್ತು ಸಾಮಾಜಿಕ ಬದ್ಧತೆ ಇಲ್ಲವಾಗಿದೆ. ಆದರೆ ಈ ಹಿಂದಿನ ರಾಜಕೀಯ ವ್ಯಕ್ತಿಗಳ ಭಾಷಣಗಳನ್ನು ಕೇಳುತ್ತಿದ್ದರೇ, ನಾವೆ ಹೋಗಿ ರಾಜಕೀಯ ಮಾಡಬೇಕೆನಿಸುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಮಾನಗಳಲ್ಲಿ ಯುವ ಜನಾಂಗವು ರಾಜಕೀಯ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ನಜೀರ್ಸಾಬ್ರವರ ಮಾತುಗಳನ್ನು ಕೇಳಿದರೇ ರಾಜಕೀಯಕ್ಕೆ ನಾವು ಸೇರ್ಪಡೆಯಾಗಬೇಕೆಂದು ಅನಿಸುತ್ತದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯವು ಆರಂಭವಾದಾಗಿನಿಂದಲೂ ಇಂತಹ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಪಟ್ಟ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಾಗಾರದಲ್ಲಿ ಎಸ್.ಐ.ಆರ್.ಡಿ. ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಗಣೇಶ್ ಪ್ರಸಾದ್ ಮಾತನಾಡಿ, ಈ ನಿಟ್ಟಿನಲ್ಲಿ ತರಬೇತಿದಾರರು ಉತ್ತಮವಾದ ತರಬೇತಿಯನ್ನು ಪಡೆದಿದ್ದಾರೆ. ಅಲ್ಲದೇ 280 ಕೇಂದ್ರಗಳಲ್ಲಿ ಮುಖಾಮುಖಿ ಕಾರ್ಯಾಗಾರವನ್ನು ಆಯೋಜಿಸಿ ಜನಪ್ರತಿನಿಧಿಗಳಿಗೆ ಅವರ ಕೌಶಲ್ಯ, ಜವಾಬ್ದಾರಿ, ಕರ್ತವ್ಯ ಹಾಗೂ ಅವರ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ನೀಡಿದರೆ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಜೊತೆಗೆ ಗ್ರಾಮ ಅಭಿವೃದ್ಧಿಯೂ ಕೂಡ ಉತ್ತಮವಾಗಿರುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಾಗಾರದ ಸಂಚಾಲಕರಾದ ಡಾ.ಎಚ್.ಡಿ.ಪ್ರಶಾಂತ್ರವರು ಮಾತನಾಡಿದರು. ಕಾರ್ಯಾಗಾರದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಅಧ್ಯಕ್ಷೀಯ ನುಡಿಗಳನ್ನಾಡಿದರು.
ತರಬೇತಿ ಕಾರ್ಯಕ್ರಮವನ್ನು ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜನಾರ್ದನ, ಸಂಸ್ಥೆಯ ಪ್ರಾಧ್ಯಾಪಕ ಮಲ್ಲಿಕಾರ್ಜುನಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಐ.ಆರ್.ಡಿ. ಕಲಬುರ್ಗಿ ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಅಂಬರಾಯ ಸಾಗರ, ಎಸ್.ಐ.ಆರ್.ಡಿ. ಸಂಸ್ಥೆಯ ಪ್ರಾಧ್ಯಾಪಕರು, ಸಹಾಯಕರು, ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮತ್ತು ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.










