ಚಿಕ್ಕಮಗಳೂರು: ಬಿಜೆಪಿ ಎಂಎಲ್‍ಸಿ ಸಿ.ಟಿ ರವಿ ಹಾಗೂ ಅವರ ಮಗ ಸೂರ್ಯನಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಕಳುಹಿಸಿದ್ದಾರೆ. ಎಂಎಲ್‍ಸಿ ಸಿ.ಟಿ ರವಿ ಸ್ವಗೃಹಕ್ಕೆ ಅನಾಮಧೇಯ ವ್ಯಕ್ತಿಗಳಿಂದ ಪತ್ರವೊಂದು ಬಂದಿದೆ. ಪತ್ರದಲ್ಲಿ ಇನ್ನೂ 15 ದಿನದೊಳಗೆ ಚಿಕ್ಕಮಗಳೂರಿನಿಂದ ಬೆಳಗಾವಿಗೆ ಬಂದು ಅಭಿನೇತ್ರಿಯ ಕೈಕಾಲನ್ನು ಹಿಡಿದು ಕ್ಷಮೆಯನ್ನು ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲನ್ನು ಮುರಿದು ಸಾಯಿಸುತ್ತೇವೆ. ನಿನ್ನ ಕೈ ಕಾಲು ಮುರಿಯುತ್ತೇವೆ, ಪ್ರಾಣ ತೆಗೆಯುತ್ತೇವೆ ಹಾಗೂ ನಿನ್ನ ಮಗನನ್ನೂ ಸಾಯಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎಂಎಲ್‍ಸಿ ಸಿ.ಟಿ ರವಿ ಅವರು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.