ಮುಂಬೈ : ಭಾರತ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಅವರು ಐಸಿಸಿಯ ಫೆಬ್ರವರಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜನವರಿ ತಿಂಗಳ ಮೊದಲ ಪ್ರಶಸ್ತಿ ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಗೆ ಸಿಕ್ಕಿದ್ದು, ಇದೀಗ ಆರ್ ಅಶ್ವಿನ್ ಅವರಿಗೆ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.
ಅಶ್ವಿನ್ ಅವರು ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೈನಲ್ಲಿ ನಡೆದ 2 ಟೆಸ್ಟ್ನ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದರೆ, ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಪರ 30 ಬಾರಿ ಐದು ವಿಕೆಟ್ ಕಬಳಿಸಿದ ಆಟಗಾರನಾಗಿ ಮೂಡಿಬಂದರು. ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಒಟ್ಟು 32 ವಿಕೆಟ್ ಮತ್ತು 189 ರನ್ ಹೊಡೆಯುವ ಮೂಲಕ ಭಾರತ 3-1 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಟೆಸ್ಟ್ ನಲ್ಲಿ 400 ವಿಕೆಟ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದಾರೆ.
ಫೆಬ್ರವರಿ ತಿಂಗಳ ಕ್ರಿಕೆಟಿಗ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗಾಗಿ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ವೆಸ್ಟ್ ಇಂಡೀಸ್ ತಂಡದ ಕೈಲ್ ಮೇಯರ್ಸ್ ಅವರು ಸ್ಪರ್ಧೆಯಲ್ಲಿದ್ದರು. ಆದರೆ ಅಂತಿಮವಾಗಿ ಆರ್ ಅಶ್ವಿನ್ ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ವನಿತ ವಿಭಾಗದಲ್ಲಿ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಇಂಗ್ಲೆಂಡ್ ನ ಟಾಮಿ ಬ್ಯೂಮಂಟ್ ಅವರು ಐಸಿಸಿಯ ಫೆಬ್ರವರಿ ತಿಂಗಳ ಪ್ರಶಸ್ತಿ ಪಡೆದುಕೊಂಡಿದ್ದಾರೆ.










